ಮದ್ಯದ ಅಮಲಿನಲ್ಲಿ ಶಿಕ್ಷಕನ ಕಿತಾಪತಿ; ಶಾಲಾ ಅವಧಿಯಲ್ಲೇ ಕುಡಿದು ಬಂದ ಅಧ್ಯಾಪಕ….!
ನ್ಯೂಸ್ ಆ್ಯರೋ : ವಿದ್ಯೆ ಕಲಿಸುವ ಗುರು ದೇವರಿಗೆ ಸಮಾನ. ಗುರು ತೋರಿದ ಮಾರ್ಗದಲ್ಲೇ ವಿದ್ಯಾರ್ಥಿಗಳು ಮುಂದೆ ಸಾಗುತ್ತಾರೆ. ಆದರೆ ಇನ್ನೊಬ್ಬ ಶಿಕ್ಷಕನ ವರ್ತನೆಯೇ ಎಲ್ಲರಿಗೆ ಭಯ ಹುಟ್ಟಿಸಿದೆ.
ಕುಡಿದ ಅಮಲಿನಲ್ಲಿ ವೀರ್ ಸಿಂಗ್ ಮೇಧಾ ಎಂಬ ಶಿಕ್ಷಕ ವಿದ್ಯಾರ್ಥಿನಿಯ ಜಡೆ ಕತ್ತರಿಸಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಸೆ. 05 ಶಿಕ್ಷಕರ ದಿನದಂದೇ ನಡೆದಿದೆ.
ಸೇಮಲಖೇಡಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರೊಬ್ಬರು ಶಾಲೆಯಲ್ಲಿ ಬಾಲಕಿಯು ಜೋರಾಗಿ ಅಳುತ್ತಿರುವುದನ್ನು ಗಮನಿಸಿ ತರಗತಿಯ ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ಶಿಕ್ಷಕ ಬಾಲಕಿಯ ಕೂದಲು ಕತ್ತರಿಸುತ್ತಿರುವ ದೃಶ್ಯವನ್ನು ಕಂಡು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಲಕಿಯ ಕೂದಲು ಕತ್ತರಿಸದಂತೆ ಗ್ರಾಮಸ್ಥರು ತಡೆದರೂ ಸಹ ‘ನೀವು ವಿಡಿಯೋ ಮಾಡಿ, ಆದರೆ ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ’ ಎಂದು ಶಿಕ್ಷಕ ದರ್ಪದಿಂದ ಮಾತನಾಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕ ವೀರ್ ಸಿಂಗ್ ಮೇಧಾನನ್ನು ಅಮಾನತುಗೊಳಿಸಲಾಗಿದೆ ಮತ್ತು ಈತನ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ರಾಜೇಶ್ ಬಾಥಮ್ ತಿಳಿಸಿದ್ದಾರೆ.
Leave a Comment