ಸುದೀರ್ಘ ಯುದ್ಧ ಅಂತ್ಯಗೊಳಿಸಲು ನಿರ್ಧಾರ; ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್-ಹಮಾಸ್ ಒಪ್ಪಿಗೆ
ನ್ಯೂಸ್ ಆ್ಯರೋ: ಕಳೆದ 15 ತಿಂಗಳಿಂದ ಸುದೀರ್ಘ ಯುದ್ಧದಲ್ಲಿ ಸಿಲುಕಿರುವ ಇಸ್ರೇಲ್-ಹಮಾಸ್ ಕೊನೆಗೂ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಜಗತ್ತಿನಾದ್ಯಂತ ಅಲ್ಲಲ್ಲಿ ನಡೆಯುತ್ತಿರುವ ಯುದ್ಧಗಳಿಗೂ ವಿರಾಮ ಹಾಕೋಕೆ ದೇಶ ದೇಶಗಳ ನಡುವೆ ಒಪ್ಪಂದ ಏರ್ಪಡುವುದು ಹೊಸದೇನೂ ಅಲ್ಲ. ಆದರೆ, ಜಿದ್ದಿಗೆ ಬಿದ್ದವರಂತೆ ನಿರಂತರವಾಗಿ ವರ್ಷಕ್ಕೂ ಹೆಚ್ಚು ಸಮಯದಿಂದ ಸಮರ ನಡೆಸುತ್ತಿರುವ ಇಸ್ರೇಲ್-ಹಮಾಸ್, ರಷ್ಯಾ-ಉಕ್ರೇನ್ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ಜಾಗತಿಕ ನಾಯಕರು ನಿರಂತರ ಯತ್ನ ನಡೆಸಿದ್ದರು. ಇದೀಗ ಇಸ್ರೇಲ್ ಮತ್ತು ಹಮಾಸ್ ನಡುವಿನ ಮಾತುಕತೆ ಬಹುತೇಕ ಯಶಸ್ವಿಯಾಗಿದೆ. ಇದೀಗ ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ವಿರಾಮಕ್ಕೆ ಸಂಬಂಧಿಸಿದಂತೆ ಒಪ್ಪಂದದ ಅಂತಿಮ ಡ್ರಾಫ್ಟ್ ಸಿದ್ಧವಾಗಿದ್ದು, ಇಸ್ರೇಲ್-ಹಮಾಸ್ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ.
ಇಸ್ರೇಲ್ ಮತ್ತು ಹಮಾಸ್ ಯುದ್ಧ ವಿರಾಮ ಹಾಗೂ ಒತ್ತೆಯಾಳುಗಳ ಬಿಡುಗಡೆಗೆ ಸಂಬಂಧಿಸಿದಂತೆ ಕರಡನ್ನು ಸಿದ್ಧಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಇತ್ತೀಚೆಗಷ್ಟೇ ದೂರವಾಣಿ ಮೂಲಕ ಚರ್ಚೆ ಮಾಡಿದ್ದರು.
ಈಗಾಗಲೇ ಹತ್ತಾರು ತಿಂಗಳಿನಿಂದಲೂಸ ಅಮೆರಿಕ, ಈಜಿಪ್ಟ್ ಮತ್ತು ಕತಾರ್ ದೇಶಗಳ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆಯುತ್ತಿತ್ತು. ಯುದ್ಧಕ್ಕೆ ಬ್ರೇಕ್ ಹಾಕುವ ಒಪ್ಪಂದವು ಇನ್ನೇನು ಆಗಿಯೇ ಹೋಯ್ತು ಅನ್ನುವಷ್ಟರಲ್ಲಿ ಅಹಂ ಎದುರಾಯಿತು. ಎಲ್ಲ ಪ್ರಯತ್ನಗಳೂ, ಮಾತುಗತೆಗಳೂ ಅರ್ಧಕ್ಕೆ ನಿಂತು ಹೋದವು. ಅತ್ತ ಇಸ್ರೇಲ್ ಕೂಡ ತಣ್ಣಗಾಗಲು ಬಯಸಲಿಲ್ಲ, ಇತ್ತ ಹಮಾಸ್ ಕೂಡ ಅಡಗಿ ನಡೆಸುವ ದಾಳಿಗಳನ್ನು ನಿಲ್ಲಿಸಲಿಲ್ಲ.
ಈಗ ಇಸ್ರೇಲ್, ಹಮಾಸ್ ಎರಡೂ ಕಡೆಯವರಿಗೆ ಪ್ರಸ್ತುತಪಡಿಸಬೇಕಾದ ಅಂತಿಮ ವಿವರಗಳನ್ನು ಸಿದ್ಧಪಡಿಸಲಾಗಿದೆ. ಇನ್ನು ಟ್ರಂಪ್ ಅಧಿಕಾರ ಸ್ವೀಕಾರ ಜನವರಿ 20ರಂದು ನಡೆಯಲಿದೆ. ಅದಕ್ಕೂ ಮುಂಚೆಯೇ ಕದನ ವಿರಾಮ ಒಪ್ಪಂದ ಪೂರ್ಣಗೊಂಡರೆ, ಬೈಡನ್ ಪ್ರಯತ್ನವೂ ಇತಿಹಾಸದಲ್ಲಿ ಉಳಿಯಲಿದೆ. ಈ ಕಾರಣಕ್ಕಾಗಿಯೇ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಇದರ ಮಧ್ಯಸ್ಥಿತಿ ವಹಿಸಿದ್ದಾರೆ ಎನ್ನಲಾಗಿದೆ.
Leave a Comment