ಚಲಿಸುತ್ತಿದ್ದ ‘108’ ಅಂಬ್ಯುಲೆನ್ಸ್ನಲ್ಲಿ ಬಾಲಕಿಯ ಅತ್ಯಾಚಾರ; ಮಧ್ಯ ಪ್ರದೇಶದಲ್ಲಿ ಅಮಾನವೀಯ ಕೃತ್ಯ
ನ್ಯೂಸ್ ಆ್ಯರೋ: ಚಲಿಸುತ್ತಿದ್ದ ಅಂಬ್ಯುಲೆನ್ಸ್ನಲ್ಲಿಯೇ ದುರುಳರು 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ಮಧ್ಯ ಪ್ರದೇಶದ ಮೌಗಂಜ್ ಜಿಲ್ಲೆಯಲ್ಲಿ ನಡೆದಿದೆ. ನವೆಂಬರ್ 22ರಂದು ತುರ್ತು ಸೇವಾ ಅಂಬ್ಯುಲೆನ್ಸ್ 108ರಲ್ಲಿ ದುಷ್ಕೃತ್ಯ ಎಸಗಿದ ನಾಲ್ವರು ದುರುಳರ ಪೈಕಿ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ರೇವಾ ವ್ಯಾಪ್ತಿಯ ಪ್ರಧಾನ ಉಪ ಇನ್ಸ್‌ಪೆಕ್ಟರ್ ಸಾಕೇತ್ ಪಾಂಡೆ ಮಾಹಿತಿ ನೀಡಿದ್ದಾರೆ.
ಬಾಲಕಿ ತನ್ನ ಸಹೋದರಿ ಮತ್ತು ಬಾವನೊಂದಿಗೆ ಅಂಬ್ಯುಲೆನ್ಸ್ನಲ್ಲಿ ತೆರಳುತ್ತಿದ್ದಳು. ಈ ಮೂವರ ಹೊರತಾಗಿ ಚಾಲಕ ಮತ್ತು ಆತನ ಮೂವರು ಸಹಚರರು ಅಂಬ್ಯುಲೆನ್ಸ್ನಲ್ಲಿದ್ದರು. ಈ ವೇಳೆ ದುಷ್ಕೃತ್ಯ ನಡೆದಿದೆ. ಬಾಲಕಿಯ ಸಹೋದರಿ ಮತ್ತು ಬಾವನ ವಿರುದ್ಧ ಘಟನೆಗೆ ಸಹಕರಿಸಿದ ಆರೋಪವೂ ಇದ್ದು, ಇಬ್ಬರೂ ನಾಪತ್ತೆಯಾಗಿದ್ದಾರೆ. ಅಂಬ್ಯುಲೆನ್ಸ್ ಚಾಲಕ ಅವರಿಗೆ ಪರಿಚಿತ ಎಂದು ತಿಳಿದು ಬಂದಿದೆ.
ಮಾರ್ಗಮಧ್ಯೆ ನೀರು ತರುವ ನೆಪದಲ್ಲಿ ಬಾಲಕಿಯ ಸಹೋದರಿ ಹಾಗೂ ಆಕೆಯ ಬಾವ ಅಂಬ್ಯುಲೆನ್ಸ್‌ನಿಂದ ಕೆಳಗಿಳಿದಿದ್ದಾರೆ. ಈ ವೇಳೆ ಚಾಲಕ ಅವರಿಬ್ಬರಿಗೆ ಕಾಯುವ ಬದಲಾಗಿ, ಅವರನ್ನು ಅಲ್ಲಿಯೇ ಬಿಟ್ಟು ವೇಗವಾಗಿ ತೆರಳಿದ್ದಾನೆ. ಇದಾದ ಬಳಿಕ ಆತ ಸೇರಿದಂತೆ ಇತರೆ ಸಹಚರರು ಚಲಿಸುತ್ತಿದ್ದ ಅಂಬ್ಯುಲೆನ್ಸ್ನಲ್ಲಿಯೇ ಅತ್ಯಾಚಾರ ಎಸಗಿದ್ದಾರೆ. ಇದಾದ ಬಳಿಕ ಬಾಲಕಿಯನ್ನು ರಾತ್ರಿಯಿಡೀ ತಮ್ಮ ವಶದಲ್ಲಿರಿಸಿಕೊಂಡಿದ್ದು, ಮರುದಿನ ಬೆಳಗ್ಗೆ ರಸ್ತೆ ಬದಿ ಎಸೆದು ಹೋಗಿದ್ದಾರೆ.
ಮನೆ ತಲುಪಿದ ಸಂತ್ರಸ್ತೆ ನಡೆದ ಘಟನೆಯನ್ನು ತಾಯಿಗೆ ವಿವರಿಸಿದ್ದಾರೆ. ಸಮಾಜದಲ್ಲಿ ಕುಟುಂಬದ ಗೌರವ ಏನಾಗುತ್ತದೋ ಎಂಬ ಆತಂಕದಿಂದ ಎರಡು ದಿನಗಳ ಕಾಲ ಅವರು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲ. ಬಳಿಕ ನವೆಂಬರ್ 25ರಂದು ಪ್ರಕರಣ ದಾಖಲಿಸಿದ್ದಾರೆ. 25ರಿಂದ 30 ವರ್ಷದ ನಾಲ್ವರು ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಾಲ್ವರು ಆರೋಪಿಗಳ ಮೇಲೆ ಪೋಕ್ಸೋ ಮತ್ತು ಭಾರತೀಯ ನ್ಯಾಯಸಂಹಿತೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
Leave a Comment