ಆತ್ಮಹತ್ಯೆಗೆ ಯತ್ನಿಸಿದ ಡ್ರೋನ್ ಆಪರೇಟರ್; ಜಮೀರ್ ಪುತ್ರ ಝೈದ್ ಖಾನ್ ‘ಕಲ್ಟ್’ ತಂಡದ ವಿರುದ್ಧ ದೂರು

Kalt
Spread the love

ನ್ಯೂಸ್ ಆ್ಯರೋ: ಕಲ್ಟ್‌ ಚಿತ್ರತಂಡದ ಯಡವಟ್ಟಿನಿಂದಾಗಿ ಸಚಿವ ಜಮೀರ್ ಅಹ್ಮದ್ ಪುತ್ರ ಚಿತ್ರನಟ ಜೈದ್ ಖಾನ್ ವಿರುದ್ಧ ಮಾಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಚಿತ್ರತಂಡದ ಯಡವಟ್ಟಿನಿಂದಾಗಿ ಬೆಂಗಳೂರಿನಲ್ಲಿ ಡ್ರೋನ್ ಟೆಕ್ನಿಷಿಯನ್ ಸಂತೋಷ್‌ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದಕ್ಕೆ ಕಾರಣವಾದ ಕಲ್ಟ್ ಚಿತ್ರದ ನಾಯಕ ಜೈದ್ ಖಾನ್‌ ಹಾಗೂ ನಿರ್ದೇಶಕ ಅನಿಲ್ ಮೇಲೆ ಗಂಭೀರ ಆರೋಪ ಕೇಳಿಬಂದಿದ್ದು, ದೂರು ದಾಖಲಾಗಿದೆ.

ಏನಿದು ಪ್ರಕರಣ?

ಇದೇ ತಿಂಗಳ ನ.25ರಂದು ಚಿತ್ರದುರ್ಗದಲ್ಲಿ ಕಲ್ಟ್‌ ಚಿತ್ರತಂಡ ಶೂಟಿಂಗ್‌ ನಡೆಸುತ್ತಿತ್ತು. ಕಲ್ಟ್ ಚಿತ್ರಕ್ಕೆ ಸಂತೋಷ್ ಡ್ರೋನ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಹಲವು ಸಿನಿಮಾಗಳಿಗೆ ಡ್ರೋನ್‌ ಟೆಕ್ನಿಷಿಯನ್‌ ಆಗಿ ಕೆಲಸ ಮಾಡಿರುವ ಸಂತೋಷ್‌ ಸ್ವಂತವಾಗಿ ಡ್ರೋನ್ ಹೊಂದಿದ್ದರು. 25 ಲಕ್ಷ ರೂ. ಸಾಲಸೋಲ ಮಾಡಿ ಡ್ರೋನ್‌ ಖರೀದಿಸಿದ್ದ ಸಂತೋಷ್‌ ಸಿನಿಮಾ ಶೂಟಿಂಗ್‌ಗಾಗಿ ದಿನಕ್ಕೆ 25,000 ರೂ. ಚಾರ್ಜ್‌ ಮಾಡುತ್ತಿದ್ದರು.

ಮಾರ್ಟಿನ್, ಯುವ ಸೇರಿದಂತೆ ಹಲವು ಚಿತ್ರಗಳಿಗೆ ಕೆಲಸ ಮಾಡಿರುವ ಸಂತೋಷ್, ಕಲ್ಟ್‌ ಚಿತ್ರಕ್ಕೂ ಶೂಟಿಂಗ್‌ ಮಾಡುವ ಕೆಲಸಕ್ಕೆ ಒಪ್ಪಿಕೊಂಡಿದ್ದರು. ಡ್ರೋನ್‌ನಲ್ಲಿ ಚಿತ್ರೀಕರಣ ಮಾಡುವುದು ರಿಸ್ಕ್ ಇದೆ ಅಂತ ಎಚ್ಚರಿಕೆ ಕೊಟ್ಟಿದ್ದರೂ ನಿರ್ದೇಶಕ ಮಾಡಲೇಬೇಕು ಎಂದು ಒತ್ತಾಯ ಮಾಡಿದ್ರು ಎನ್ನಲಾಗಿದೆ. ಶೂಟಿಂಗ್‌ ವೇಳೆ ಡ್ರೋನ್ ವಿಂಡ್ ಫ್ಯಾನ್‌ಗೆ ಟಚ್ ಆಗಿ ಪೀಸ್ ಪೀಸ್ ಆಗಿತ್ತು. ಇದಾದ ಬಳಿಕ ಸಂತೋಷ್‌ಗೆ ಕೊಂಚವೂ ನಷ್ಟ ಕಟ್ಟಿಕೊಡದ ಚಿತ್ರತಂಡ ಕಲ್ಟ್ ಚಿತ್ರವನ್ನ ಸಚಿವ ಜಮೀರ್ ಪುತ್ರ ಜೈದ್ ನಿರ್ಮಾಣ ಮಾಡುತ್ತಿದ್ರು. ಹೀಗಾಗಿ ಸಂತೋಷ್‌ ಜೈದ್‌ ಬಳಿಯೇ ಪರಿಹಾರ ನೀಡುವಂತೆ ಕೇಳಿಕೊಂಡಿದ್ದ.

ಆದ್ರೆ ಸಂತೋಷ್ ಬಳಿ ವೈಟ್ ಪೇಪರ್ ಮೇಲೆ ಜಮೀರ್ ಪುತ್ರ ಜೈದ್ ಸಹಿ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಒಂದೂವರೆ ಲಕ್ಷ ರೂ. ಮೌಲ್ಯದ ಫುಟೇಜ್‌ ರೆಕಾರ್ಡಿಂಗ್‌ ಆಗಿದ್ದ ಮೆಮೊರಿ ಕಾರ್ಡ್‌ ಕಿತ್ತುಕೊಂಡಿದ್ದಾರೆ, ಆಧಾರ್‌ ಕಾರ್ಡ್‌ ನಂಬರ್‌ ಸಹ ಬರೆಸಿಕೊಂಡು ಅವಮಾನ ಮಾಡಿದ್ದಾರೆ. ಇದರಿಂದ ಮನನೊಂದು ಮನೆಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಂತೋಷ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.

Leave a Comment

Leave a Reply

Your email address will not be published. Required fields are marked *

error: Content is protected !!