ಸೆಲ್ಫಿ ತೆಗೆದುಕೊಳ್ಳುವ ವೇಳೆ ಕೆರೆಗೆ ಜಾರಿದ ಹಂಸ; 12 ಗಂಟೆಗಳ ಬಳಿಕ ಬದುಕಿ ಬಂದಿದ್ದೇ ರೋಚಕ !
ನ್ಯೂಸ್ ಆ್ಯರೋ: ಕೆರೆಗೆ ಬಿದ್ದಿದ್ದ ಯುವತಿ 12 ಗಂಟೆಗಳ ಕಾರ್ಯಾಚರಣೆ ಬಳಿಕ ಬದುಕಿ ಬಂದಿರುವ ಘಟನೆ ತುಮಕೂರಿನ ಮೈದಾಳ ಕೆರೆಯಲ್ಲಿ ನಡೆದಿದೆ. ಸೆಲ್ಫಿ ತೆಗೆದುಕೊಳ್ಳುವಾಗ ಯುವತಿ ಹಂಸ ಎಂಬಾಕೆ ಕಾಲು ಜಾರಿ ಕೆರೆಗೆ ಬಿದ್ದಿದ್ದಳು. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ತಂಡ ಹಾಗೂ ಕ್ಯಾತಸಂದ್ರ ಪೊಲೀಸರು ಆಗಮಿಸಿ ಶೋಧ ಕಾರ್ಯ ಆರಂಭಿಸಿದ್ದರು.
ಕೆರೆ ಕೋಡಿ ನೀರು ಹರಿಯುವ ಬಳಿ ಕಾಲು ಜಾರಿ ಕಲ್ಲಿನ ಪೊಟರೆಯೊಳಗೆ ಸಿಲುಕಿಕೊಂಡಿದ್ದ ಯುವತಿ, ಯುವತಿ ಮುಳ್ಳಿನ ಪೊದೆಯಲ್ಲಿ ಸಿಲುಕಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸತತ 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಯುವತಿಯನ್ನ ಅಗ್ನಿಶಾಮಕ ತಂಡ ರಕ್ಷಣೆ ಮಾಡಿ ಹೊರಗೆ ತಂದಿದೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಸೋಮನಾಥ್ ಅವರ ಪುತ್ರಿ ಹಂಸ ತುಮಕೂರು ತಾಲೂಕಿನ ಮೈದಾಳ ಕೆರೆ ವೀಕ್ಷಣೆಗೆ ತೆರಳಿದ ಸಂದರ್ಭದಲ್ಲಿ ಘಟನೆ ನಡೆದಿದೆ. ನಿನ್ನೆ ರಜೆ ಇದ್ದ ಹಿನ್ನೆಲೆ ಸ್ನೇಹಿತರ ಜೊತೆ ಹಂಸ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದರು. ಈ ವೇಳೆ ಅಲ್ಲೆ ಸಮೀಪದಲ್ಲಿರುವ ಮೈದಾಳ ಕೆರೆ ತುಂಬಿ ಕೋಡಿ ಬಿದ್ದಿತ್ತು. ಅದನ್ನ ನೋಡಲು ತೆರಳಿದ್ದ ವೇಳೆ ಅವಘಡ ಸಂಭವಿಸಿತ್ತು.
ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿಗಳು ಭೇಟಿ ನೀಡಿ ನಿನ್ನೆ ಸಂಜೆಯಿಂದಲೇ ಕಾರ್ಯಾಚರಣೆ ಆರಂಭಿಸಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಯುವತಿಯ ಹುಡುಕಾಟಕ್ಕೆ ತೀವ್ರ ಕಾರ್ಯಾಚರಣೆ ನಡೆಸಿದ್ದರು. ಕೆರೆ ಕೋಡಿ ನೀರನ್ನ ಬೇರೆಡೆಗೆ ಡೈವರ್ಟ್ ಮಾಡಿ ಕಾರ್ಯಾಚರಣೆ ಆರಂಭಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಯುವತಿಯನ್ನು ರಕ್ಷಣೆ ಮಾಡಲು ಯಶಸ್ವಿಯಾಗಿದ್ದಾರೆ. ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Leave a Comment