ಗುಕೇಶ್ಗೆ ಸೋಲಿನ ಆಘಾತ; ರೋಚಕ ಘಟ್ಟದತ್ತ ಡಬ್ಲ್ಯುಸಿಸಿ ಫೈನಲ್
ಸಿಂಗಾಪುರದ ರೆಸಾರ್ಟ್ಸ್ ವರ್ಲ್ಡ್ ಸೆಂಟೋಸಾದಲ್ಲಿರುವ ಈಕ್ವೇರಿಯಸ್ ಹೋಟೆಲ್‌ನಲ್ಲಿ ನಡೆಯುತ್ತಿರುವ 2024 ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ 11ನೇ ಗೇಮ್ನಲ್ಲಿ ಗೆಲುವು ಸಾಧಿಸುವ ಮೂಲಕ ಪಂದ್ಯಾವಳಿಯಲ್ಲಿ 1 ಅಂಕದ ಮುನ್ನಡೆ ಪಡೆದುಕೊಂಡಿದ್ದ ಭಾರತದ 18 ವರ್ಷದ ಗ್ರ್ಯಾಂಡ್‌ಮಾಸ್ಟರ್ ಡಿ ಗುಕೇಶ್, ಇಂದು ನಡೆದ 12ನೇ ಗೇಮ್ನಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಎದುರು ಸೊಲೊಪ್ಪಿಕೊಂಡಿದ್ದಾರೆ. ಈ ಮೂಲಕ ಉಭಯ ಆಟಗಾರರು ತಲಾ 6 ಅಂಕಗಳನ್ನು ಹೊಂದಿದ್ದು, ಇದೀಗ ಉಳಿದಿರುವ 2 ಗೇಮ್ಗಳ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.
ವಾಸ್ತವವಾಗಿ ನವೆಂಬರ್ 25 ರಿಂದ ಆರಂಭವಾಗಿರುವ ಈ ಫೈನಲ್ ಪಂದ್ಯದ ಮೊದಲ ಗೇಮ್ನಲ್ಲಿ ಗುಕೇಶ್ ಅವರನ್ನು ಲಿರೆನ್ 1.5-0.5 ರಿಂದ ಸೋಲಿಸಿದ್ದರು. ಆ ಬಳಿಕ ನಡೆದಿದ್ದ ಎರಡನೇ ಗೇಮ್ ಡ್ರಾ ಆಗಿತ್ತು. ಮೂರನೇ ಗೇಮ್ನಲ್ಲಿ ಗೆಲುವು ದಾಖಲಿಸುವ ಮೂಲಕ ಗುಕೇಶ್ ಜಯದ ಹಾದಿಗೆ ಮರಳಿದ್ದರು.
ಆದರೆ ಆ ನಂತರ ನಡೆದಿದ್ದ ಸತತ 7 ಗೇಮ್ಗಳಲ್ಲಿ ಇಬ್ಬರೂ ಆಟಗಾರರಿಗೆ ಗೆಲವು ಸಾಧಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ 7 ಗೇಮ್ಗಳು ಡ್ರಾದಲ್ಲಿ ಅಂತ್ಯಗೊಂಡಿದ್ದವು. ಆದರೆ ಭಾನುವಾರ ಅಂದರೆ ನಿನ್ನೆ ನಡೆದ ಗೇಮ್ನಲ್ಲಿ ಗೆಲುವು ಸಾಧಿಸುವ ಮೂಲಕ ಗುಕೇಶ್ ಮುನ್ನಡೆ ಸಾಧಿಸಿದ್ದರು. ಆದರೆ ಇಂದು ನಡೆದ 12 ಗೇಮ್ನಲ್ಲಿ ಚೀನಾದ ಡಿಂಗ್ ಲಿರೆನ್ ಜಯ ಸಾಧಿಸುವುದರೊಂದಿಗೆ ಅಂಕಗಳಲ್ಲಿ ಸಮಬಲ ಸಾಧಿಸಿದ್ದಾರೆ.
ವಿಶ್ವ ಚೆಸ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 14 ಸುತ್ತುಗಳು ನಡೆಯಲಿವೆ. ಇದು ಡಿಸೆಂಬರ್ 12 ರವರೆಗೆ ನಡೆಯಲಿದೆ. ಅಗತ್ಯ ಬಿದ್ದರೆ ಡಿಸೆಂಬರ್ 13 ರಂದು ಟೈಬ್ರೇಕರ್ ಸುತ್ತು ನಡೆಯಲಿದೆ. ಚಾಂಪಿಯನ್‌ಶಿಪ್ ಗೆಲ್ಲಲು 7.5 ಅಂಕಗಳ ಅಗತ್ಯವಿದ್ದು, 14 ಸುತ್ತುಗಳ ನಂತರ ಸ್ಕೋರ್ ಟೈ ಆಗಿದ್ದರೆ, ಟೈಬ್ರೇಕರ್ ಮೂಲಕ ವಿಜೇತರನ್ನು ಘೋಷಿಸಲಾಗುತ್ತದೆ.
ಇದೀಗ ಈ ಇಬ್ಬರು ತಲಾ 6 ಅಂಕಗಳನ್ನು ಸಂಪಾದಿಸಿದ್ದು, ಉಳಿದಿರುವ ಎರಡು ಗೇಮ್ಗಳು ಇಬ್ಬರ ಪಾಲಿಗೆ ನಿರ್ಣಾಯಕವಾಗಿವೆ. ಈ ಎರಡು ಗೇಮ್ಗಳಲ್ಲಿ ಇಬ್ಬರೂ ತಲಾ ಒಂದೊಂದು ಪಂದ್ಯವನ್ನು ಗೆದ್ದರೆ ಇಬ್ಬರ ಬಳಿ 7 ಅಂಕಗಳು ಇದ್ದಂತ್ತಾಗುತ್ತದೆ. ಒಂದು ವೇಳೆ ಈ ಎರಡೂ ಗೇಮ್ಗಳನ್ನು ಗುಕೇಶ್ ಗೆದ್ದುಕೊಂಡರೆ ಅವರಿಗೆ ವಿಶ್ವ ಚೆಸ್ ಚಾಂಪಿಯನ್ ಪಟ್ಟ ಒಲಿಯಲಿದೆ.
Leave a Comment