CWC2024 : 13 ವರ್ಷಗಳ ಬಳಿಕ ವಿಶ್ವಕಪ್ ಗೆದ್ದ ಭಾರತ – ರೋಚಕ‌ ಪಂದ್ಯದಲ್ಲಿ ಸೋಲು ಕಂಡ ದಕ್ಷಿಣ ಆಫ್ರಿಕಾ

20240630 002613
Spread the love

ನ್ಯೂಸ್ ಆ್ಯರೋ : ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆದ 2024ರ ಐಸಿಸಿ ಟಿ20 ವಿಶ್ವಕಪ್‌ನ ಬಹು ನಿರೀಕ್ಷಿತ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಭಾರತ ತಂಡ 7 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 2ನೇ ಬಾರಿಗೆ ಟಿ20 ವಿಶ್ವಕಪ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ.

ಇದೇ ಮೊದಲ ಬಾರಿಗೆ ಐಸಿಸಿ ವಿಶ್ವಕಪ್ ಫೈನಲ್ ಪ್ರವೇಶಿಸಿದ್ದ ದಕ್ಷಿಣ ಆಫ್ರಿಕಾ ತಂಡವು ಬಲಿಷ್ಠ ಭಾರತದೆದುರು ಕೊನೆಯ ಎಸೆತದವರೆಗೂ ಹೋರಾಡಿ ವಿರೋಚಿತ ಸೋಲೊಪ್ಪಿಕೊಂಡಿತು.

ಇನ್ನು ಈ ಮೂಲಕ ಭಾರತ ತಂಡ 13 ವರ್ಷಗಳ ಐಸಿಸಿ ವಿಶ್ವಕಪ್ ಟ್ರೋಫಿ ಬರವನ್ನು ನೀಗಿಸಿಕೊಂಡಿತು ಮತ್ತು 2007ರ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಬಳಿಕ 2024ರಲ್ಲಿ ಮತ್ತೊಮ್ಮೆ ಚಾಂಪಿಯನ್ ಪಟ್ಟ ಅಲಂಕರಿಸಿತು.
ಭಾರತ ತಂಡದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಕೊನೆಗೂ ಟಿ20 ವಿಶ್ವಕಪ್ ಟ್ರೋಫಿಯನ್ನು ಮುಡಿಗೇರಿಸಿಕೊಂಡರು. ಇದೇ ವೇಳೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರಿಗೆ ಭಾರತ ತಂಡ ಗುರು ಕಾಣಿಕೆ ನೀಡಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ವಿರಾಟ್ ಕೊಹ್ಲಿ ಅವರ ನಿರ್ಣಾಯಕ ಅರ್ಧಶತಕ ಮತ್ತು ಅಕ್ಷರ್ ಪಟೇಲ್ ಅವರ ಅಮೋಘ ಆಟದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತ್ತು.
177 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸುವ ಮೂಲಕ ವಿರೋಚಿತ ಸೋಲು ಕಂಡಿತು.

ಕೊನೆಯ ಐದು ಓವರ್ ಗಳಲ್ಲಿ ಕೇವಲ 30 ರನ್ ಗಳಿಸಬೇಕಾಗಿದ್ದ ದಕ್ಷಿಣ ಆಫ್ರಿಕಾ ಬುಮ್ರಾ, ಅರ್ಶದೀಪ್ ಹಾಗೂ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ ರನ್ ಗಳಿಸಲು ಪರದಾಡಿತು.

ಗೆಲ್ಲಲು ಹಾರ್ದಿಕ್ ಪಾಂಡ್ಯ ಅವರ ಕೊನೆಯ ಓವರ್ ನಲ್ಲಿ 16 ರನ್ ಗಳ ಅಗತ್ಯ ಇದ್ದಾಗ ಡೇವಿಡ್ ಮಿಲ್ಲರ್ ಅವರು ಸೂರ್ಯಕುಮಾರ್ ಅವರ ಅದ್ಭುತ ಕ್ಯಾಚ್ ಗೆ ಬಲಿಯಾಗುವುದರೊಂದಿಗೆ ದಕ್ಷಿಣ ಆಫ್ರಿಕಾ ಗೆಲುವಿನ ಹಾದಿ ತಪ್ಪಿತು.

Leave a Comment

Leave a Reply

Your email address will not be published. Required fields are marked *

error: Content is protected !!