ಪ್ರತಿದಿನ ಕೆಲಸಕ್ಕೆ 600 ಕಿ.ಮೀ ವಿಮಾನದಲ್ಲೇ ಹೋಗಿ ಬರ್ತಾರೆ ಈ ಮಾಮ್; ಮಕ್ಕಳಿಗಾಗಿ ಬದಲಾದ ವೇಳಾಪಟ್ಟಿ, ಕಡಿಮೆ ಖರ್ಚು

ನ್ಯೂಸ್ ಆ್ಯರೋ: ಪ್ರತಿದಿನ ಲಕ್ಷಾಂತರ ಜನರು ಬಸ್, ಮೆಟ್ರೋ, ಟ್ಯಾಕ್ಸಿ ಅಥವಾ ಕಾರಿನಲ್ಲಿ ಆಫೀಸ್ಗೆ ಹೋಗುತ್ತಾರೆ. ಆದರೆ, ಮಲೇಷ್ಯಾದಲ್ಲಿರುವ ಭಾರತೀಯ ಮೂಲದ ಮಹಿಳೆಯೊಬ್ಬಳು ಭಿನ್ನ. ಆಕೆ, ಪ್ರತಿದಿನ 600 ಕಿ.ಮೀ ಪ್ರಯಾಣ ಮಾಡುತ್ತಾರೆ. ಹಾಗಂತ ಆಕೆ ಬಸ್, ಟ್ರೇನ್, ಬುಲೆಟ್ ಟ್ರೇನ್ಅನ್ನು ಇದಕ್ಕೆ ಬಳಸುತ್ತಿಲ್ಲ. ಪ್ರತಿದಿನ ಆಕೆ ಪ್ರಯಾಣಕ್ಕಾಗಿ ವಿಮಾನವನ್ನೇ ಅವಲಂಬಿಸಿದ್ದಾರೆ. ಪ್ರತಿದಿನ ಆಕೆ ಮಲೇಷ್ಯಾದ ಪಿನಾಂಗ್ನಿಂದ ಕೌಲಾಲಂಪುರಕ್ಕೆ ಪ್ರಯಾಣ ಮಾಡುತ್ತಾರೆ, ಹಾಗಿದ್ದರೂ, ಇದು ನನಗೆ ಕೆಲಸ ಮಾಡುವ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ಇರೋದಕ್ಕಿಂತ ದೊಡ್ಡ ಮಟ್ಟದಲ್ಲಿ ಕಡಿಮೆ ಖರ್ಚಾಗುತ್ತಿದೆ ಎಂದಿದ್ದಾರೆ.
ಮಲೇಷ್ಯಾದಲ್ಲಿ ವಾಸಿಸುವ ರೇಚಲ್ ಕೌರ್ ಏರ್ ಏಷ್ಯಾದಲ್ಲಿ ಹಣಕಾಸು ಕಾರ್ಯಾಚರಣೆಗಳ ಸಹಾಯಕ ವ್ಯವಸ್ಥಾಪಕರಾಗಿದ್ದಾರೆ. ಅವರ ಮನೆ ಪಿನಾಂಗ್ನಲ್ಲಿದೆ, ಆದರೆ ಅವರ ಕಚೇರಿ ಕೌಲಾಲಂಪುರದಲ್ಲಿದೆ. ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು, 5 ಗಂಟೆಗೆ ಮನೆಯಿಂದ ಹೊರಟು 6:30 ರ ವಿಮಾನ ಹಿಡಿಯುತ್ತಾರೆ. ಸುಮಾರು 600 ಕಿ.ಮೀ. ಪ್ರಯಾಣಿಸಿದ ನಂತರ ಬೆಳಿಗ್ಗೆ 7:45 ಕ್ಕೆ ಆಫೀಸ್ ತಲುಪುತ್ತಾರೆ.
ಪ್ರತಿದಿನ ವಿಮಾನದಲ್ಲಿ ಹೋಗುವುದು ದುಬಾರಿ ಎಂದು ನೀವು ಭಾವಿಸಬಹುದು, ಆದರೆ ವಾಸ್ತವವಾಗಿ ಅದು ಅಗ್ಗವಾಗಿದೆ. ಕೌಲಾಲಂಪುರದಲ್ಲಿ ಬಾಡಿಗೆ ಮನೆಯಲ್ಲಿದ್ದಾಗ ತಿಂಗಳಿಗೆ ಸುಮಾರು ₹41,000 ($474) ಖರ್ಚು ಮಾಡುತ್ತಿದ್ದರು. ಆದರೆ ಈಗ, ವಿಮಾನದಲ್ಲಿ ಪ್ರಯಾಣಿಸಿದರೂ, ಅವರ ಮಾಸಿಕ ಖರ್ಚು ₹27,000 ($316) ಎಂದಿದ್ದಾರೆ.
ಮೊದಲು ರೇಚಲ್ ವಾರಕ್ಕೊಮ್ಮೆ ಮಾತ್ರ ಮನೆಗೆ ಹೋಗುತ್ತಿದ್ದರು. 2024 ರಲ್ಲಿ, ಅವರು ಪ್ರತಿದಿನ ವಿಮಾನದಲ್ಲಿ ಹೋಗಿ-ಬರುವ ನಿರ್ಧಾರ ತೆಗೆದುಕೊಂಡರು. ಇದರಿಂದ ಅವರು ರಾತ್ರಿ ಮಕ್ಕಳೊಂದಿಗೆ ಸಮಯ ಕಳೆಯಬಹುದು ಮತ್ತು ಬೆಳಿಗ್ಗೆ ಮತ್ತೆ ಆಫೀಸ್ಗೆ ಹೋಗಬಹುದು. ಅವರಿಗೆ ಇಬ್ಬರು ಮಕ್ಕಳಿದ್ದಾರೆ, 12 ವರ್ಷದ ಮಗ ಮತ್ತು 11 ವರ್ಷದ ಮಗಳು. ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಎದ್ದು ವಿಮಾನ ಹಿಡಿದು ಆಫೀಸ್ಗೆ ಹೋಗುವುದು ದಣಿವುಂಟುಮಾಡಬಹುದು, ಆದರೆ ಮನೆಗೆ ಹಿಂತಿರುಗಿ ಮಕ್ಕಳ ಮುಖ ನೋಡಿದಾಗ ಎಲ್ಲಾ ಆಯಾಸ ಮಾಯವಾಗುತ್ತದೆ ಎನ್ನುತ್ತಾರೆ ರೇಚಲ್.
ಇನ್ನು ಈ ಜರ್ನಿಯನ್ನು ಇವರು ಸಕತ್ ಎಂಜಾಯ್ ಮಾಡುತ್ತಿದ್ದು, ರೇಚಲ್ ಅವರ ಕಂಪನಿ ಏರ್ ಏಷ್ಯಾ ಅವರ ನಿರ್ಧಾರವನ್ನು ಬೆಂಬಲಿಸುತ್ತಿದೆ. ಈ ನಿರ್ಧಾರದಿಂದ ರೇಚಲ್ಗೆ ಉತ್ತಮ ಕೆಲಸ-ಜೀವನ ಸಮತೋಲನ ಸಿಕ್ಕಿದೆ ಮತ್ತು ಅವರ ಉತ್ಪಾದಕತೆಯೂ ಹೆಚ್ಚಾಗಿದೆ ಎಂದು ಅವರು ಭಾವಿಸುತ್ತಾರೆ.
Leave a Comment