ಮನಮೋಹನ್ ಸಿಂಗ್​ಗೆ ‘ಭಾರತ ರತ್ನ’ ನೀಡುವಂತೆ ಒತ್ತಾಯ: ತೆಲಂಗಾಣ ವಿಧಾನಸಭೆ ನಿರ್ಣಯ ಅಂಗೀಕಾರ

Manmohan Singh
Spread the love

ನ್ಯೂಸ್ ಆ್ಯರೋ : ಒಂದೆಡೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನ ಬಳಿಕ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ರಾಜಕೀಯದ ಚರ್ಚೆ ಜೋರಾಗಿದೆ. ಸಿಂಗ್ ಅವರ ಸ್ಮಾರಕ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಆದರೆ, ಅಂತಿಮ ವಿಧಿವಿಧಾನ ಜರುಗಿದ ದೆಹಲಿಯ ನಿಗಮಬೋಧ್ ಘಾಟ್‌ನಲ್ಲೇ ಮೆಮೋರಿಯಲ್​ ನಿರ್ಮಾಣ ಮಾಡಬೇಕು ಎಂದು ಕಾಂಗ್ರೆಸ್​​ ಒತ್ತಾಯಿಸುತ್ತಿದೆ. ಈ ಮಧ್ಯೆ ತೆಲಂಗಾಣ ವಿಧಾನಸಭೆಯಲ್ಲಿ ಸೋಮವಾರ ಸಂತಾಪ ಸೂಚಿಸಲಾಯಿತು. ಆರ್ಥಿಕ ತಜ್ಞನಿಗೆ ‘ಭಾರತ ರತ್ನ’ ನೀಡಲು ಒತ್ತಾಯಿಸಿ ಕಾಂಗ್ರೆಸ್​ ಮಂಡಿಸಿದ ನಿಲುವಳಿಗೆ ಸರ್ವಪಕ್ಷಗಳು ಅವಿರೋಧವಾಗಿ ಒಪ್ಪಿಗೆ ಸೂಚಿಸಿವೆ.

ಸೋಮವಾರ ಬೆಳಗ್ಗೆ 10 ಗಂಟೆಗೆ ವಿಧಾನಸಭೆಯ ಸದನ ಆರಂಭದ ಬಳಿಕ ಮಾಜಿ ಪ್ರಧಾನಿಯ ನಿಧನಕ್ಕೆ ಸಂತಾಪ ಸೂಚಿಸಲು ಸ್ಪೀಕರ್ ಪ್ರಸಾದ್ ಕುಮಾರ್ ಅವರು ಹೇಳಿದರು. 2 ನಿಮಿಷಗಳ ಕಾಲ ಮೌನಾಚರಣೆ ಮಾಡಲಾಯಿತು.

ಬಳಿಕ ಮುಖ್ಯಮಂತ್ರಿ ರೇವಂತ್​ ರೆಡ್ಡಿ ಅವರು, ಮಾಜಿ ಪ್ರಧಾನಿಯ ಸಾಧನೆಗೆ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನವನ್ನು ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ನಿಲುವಳಿ ಮಂಡಿಸಿದರು. ಈ ನಿರ್ಣಯಕ್ಕೆ ಎಲ್ಲ ವಿಪಕ್ಷಗಳೂ ಒಪ್ಪಿಗೆ ಸೂಚಿಸಿದ್ದರಿಂದ ಅವಿರೋಧವಾಗಿ ಅಂಗೀಕರಿಸಲಾಯಿತು.

ನಿಲುವಳಿ ಮಂಡಿಸಿ ಮಾತನಾಡಿದ ಸಿಎಂ ರೇವಂತ್ ರೆಡ್ಡಿ, ಮಾಜಿ ಪ್ರಧಾನಿಯವರ ನಿಧನ ದೇಶಕ್ಕೆ ತುಂಬಲಾರದ ನಷ್ಟ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವು ಜಾರಿಗೆ ತಂದ ಉದ್ಯೋಗ ಖಾತ್ರಿ ಯೋಜನೆ (ಮನರೇಗಾ), ಮಾಹಿತಿ ಹಕ್ಕು, ಭೂ ಸ್ವಾಧೀನ ಕಾಯ್ದೆಗಳು ಮಹತ್ತರ ಮೈಲುಗಲ್ಲಾಗಿವೆ ಎಂದು ಬಣ್ಣಿಸಿದರು.

ಸಿಂಗ್​ ಅವರು ಪ್ರಧಾನಿಯಾಗಿದ್ದಾಗ ತೆಲಂಗಾಣಕ್ಕೆ ರಾಜ್ಯ ಸ್ಥಾನಮಾನ ನೀಡಿ, ಇಲ್ಲಿನ ಜನತೆಯ ಆಶೋತ್ತರಗಳನ್ನು ಈಡೇರಿಸಿದ ಮಹಾನ್ ನಾಯಕ. ಇದರ ಗೌರವಾರ್ಥವಾಗಿ ಹೈದರಾಬಾದ್‌ನಲ್ಲಿ ಅವರ ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಹೇಳಿದರು.

ವಿಪಕ್ಷ ಭಾರತ ರಾಷ್ಟ್ರ ಸಮಿತಿ (BRS) ಪರವಾಗಿ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ಅವರು ನಿರ್ಣಯವನ್ನು ಬೆಂಬಲಿಸಿದರು. ಸಿಂಗ್ ಅವರು “ಆಧುನಿಕ ಭಾರತದ ವಾಸ್ತುಶಿಲ್ಪಿ” ಎಂದು ಹೊಗಳಿದರು. ಜೊತೆಗೆ, ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರ ಸ್ಮಾರಕವನ್ನು ರಾಜಧಾನಿಯಲ್ಲಿ ಸ್ಥಾಪಿಸುವ ನಿರ್ಣಯವನ್ನೂ ವಿಧಾನಸಭೆಯು ಅಂಗೀಕರಿಸಬೇಕು ಎಂದು ಅವರು ಇದೇ ವೇಳೆ ಸರ್ಕಾರಕ್ಕೆ ಮನವಿ ಮಾಡಿದರು.

ಪ್ರತಿಪಕ್ಷದ ನಾಯಕ ಕೆ. ಚಂದ್ರಶೇಖರ್ ರಾವ್ ಅವರು ಕಲಾಪಕ್ಕೆ ಗೈರಾಗಿದ್ದರು. ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿ ಮನಮೋಹನ್ ಸಿಂಗ್ (92) ಅವರು ಡಿಸೆಂಬರ್ 26 ರಂದು ನವದೆಹಲಿಯ ಏಮ್ಸ್‌ನಲ್ಲಿ ನಿಧನರಾದರು.

Leave a Comment

Leave a Reply

Your email address will not be published. Required fields are marked *

error: Content is protected !!