ಪ್ರಫುಲ್ಲವಾಗಿರಲಿ ನಿಮ್ಮ ಮುಂಜಾನೆ : ಬೆಳಗ್ಗೆ ಎದ್ದ ತಕ್ಷಣ ಹೀಗೆ ಮಾಡುವುದು ಅಶುಭವಂತೆ
ನ್ಯೂಸ್ ಆ್ಯರೋ: ನಾವು ನಮ್ಮ ದಿನವನ್ನು ಹೇಗೆ ಆರಂಭಿಸುತ್ತೇವೆ ಎಂಬುದರ ಮೇಲೆ ಬಹುತೇಕ ನಮ್ಮ ಇಡೀ ದಿನ ಅವಲಂಬಿತವಾಗಿರುತ್ತದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಬೆಳಗ್ಗೆ ಉಲ್ಲಾಸದಿಂದ ಎದ್ದರೆ ಆ ದಿನವೂ ಬಹುತೇಕ ಉಲ್ಲಾಸದಿಂದಲೇ ಕೂಡಿರುತ್ತದೆ. ಬದುಕಿನಲ್ಲಿ ಕೆಲವೊಂದು ಅನಿರೀಕ್ಷಿತ ಘಟನೆಗಳು, ಸನ್ನಿವೇಶಗಳನ್ನು ಎದುರಾಗಬಹುದು. ಆದರೆ, ಈ ಅನಿರೀಕ್ಷಿತ ಸನ್ನಿವೇಶಗಳನ್ನು ಹೊರತುಪಡಿಸಿ ಇಡೀ ದಿನ ಉಲ್ಲಾಸವಾಗಿರಲು ನಾವು ಮುಂಜಾನೆಯಿಂದಲೇ ಉಲ್ಲಾಸ, ಉತ್ಸಾಹವನ್ನು ಕಾಯ್ದುಕೊಳ್ಳಬೇಕು ಎಂಬುದು ಸತ್ಯ.
ಬೆಳಗ್ಗೆ ಎದ್ದ ತಕ್ಷಣ ಮಂಗಳಕರ ಕಾರ್ಯಗಳನ್ನು ಮಾಡಿದರೆ ಆ ದಿನ ಕೂಡಾ ಶುಭದಾಯಕ, ಮಂಗಳಕರವೂ ಆಗಿರುತ್ತದೆ ಎಂಬುದು ನಂಬಿಕೆ. ಆದರೆ, ಕೆಲವೊಂದು ಸಲ ಕೆಲವೊಂದು ವಿಷಯಗಳನ್ನು ನಾವು ನಿರ್ಲಕ್ಷಿಸುತ್ತೇವೆ. ಇದು ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರಬಹುದು ಎಂಬುದು ಹಿರಿಯರ ಮಾತು. ಅಂತೆಯೇ, ನಾವು ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡಬಾರದು ಎಂಬ ನಿಯಮವಿದೆ. ಯಾಕೆ ಈ ನಿಯಮ ಅಂತ ನೋಡೋಣ.
ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಬಾರದು ಎಂಬ ನಂಬಿಕೆ ನಮ್ಮಲ್ಲಿದೆ. ಹೀಗೆ ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡಿದರೆ ಅಶುಭ ಎಂದು ನಂಬಲಾಗಿದೆ. ಇಂತಹದ್ದೊಂದು ನಂಬಿಕೆಯ ಹಿಂದೆ ಕಾರಣವೂ ಇದೆ. ಯಾಕೆಂದರೆ, ರಾತ್ರಿ ಮಲಗುವಾಗ ನಮ್ಮ ದೇಹ ನಕರಾತ್ಮಕ ಶಕ್ತಿಯ ಹಿಡಿತದಲ್ಲಿರುತ್ತದೆ. ಹೀಗಾಗಿ, ಬೆಳಗ್ಗೆ ಎದ್ದಾಗ ನಾವು ಸೋಮಾರಿತನದಿಂದ ತುಂಬಿರುತ್ತೇವೆ. ಇಂತಹ ಜಡದ ಸ್ಥಿತಿಯಲ್ಲಿ ನಾವು ಕನ್ನಡಿಯನ್ನು ನೋಡುವುದು ಒಳ್ಳೆಯದಲ್ಲವಂತೆ.
ಯಾಕೆಂದರೆ, ನಮ್ಮ ದೇಹದಲ್ಲಿರುವ ನಕಾರಾತ್ಮಕ ಶಕ್ತಿಯೊಂದಿಗೆ ಕನ್ನಡಿಯಲ್ಲಿ ನೋಡುವುದು ನಮಗೆ ಹೆಚ್ಚು ನಕಾರಾತ್ಮಕವಾಗಬಹುದು ಅಥವಾ ಈ ನಕಾರಾತ್ಮಕ ಅಂಶಗಳು ಕನ್ನಡಿಯಲ್ಲಿ ಕಾಣಿಸಿ ಅದು ನಮ್ಮ ಮನ:ಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ, ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಕನ್ನಡಿ ನೋಡಬಾರದು ಎಂಬ ನಂಬಿಕೆ ಇದೆ.
ನಿಮ್ಮ ದಿನವನ್ನು ಉತ್ತಮಗೊಳ್ಳಬೇಕಾದರೆ ಬೆಳಗ್ಗೆ ಎದ್ದ ತಕ್ಷಣ ಧ್ಯಾನ ಭಂಗಿಯಲ್ಲಿ ಕುಳಿತುಕೊಳ್ಳಬೇಕು. ಇದರಿಂದ ನಿಮ್ಮ ಮನಸ್ಸು ಕೇಂದ್ರೀಕೃತವಾಗುತ್ತದೆ. ಮನಸ್ಸಿನಲ್ಲಿ ಒಳ್ಳೆಯ ಆಲೋಚನೆಗಳು ಬರುತ್ತವೆ. ಹೀಗೆ ಧ್ಯಾನದ ಭಂಗಿಯಲ್ಲಿ ಕುಳಿತುಕೊಳ್ಳುವ ಮೂಲಕ ನಿಮ್ಮ ಇಷ್ಟ ದೇವರನ್ನೂ ಸ್ಮರಿಸಿ ಪ್ರಾರ್ಥಿಸಬಹುದು. ಆಗ ಮನಸ್ಸಿನಲ್ಲಿ ನೆಮ್ಮದಿ ಮೂಡುತ್ತದೆ.
ಜತೆಗೆ, ಬೆಳಗ್ಗೆ ಎದ್ದ ತಕ್ಷಣ ನಮ್ಮ ಅಂಗೈಯನ್ನು ಉಚ್ಚಿ ಅದನ್ನು ನೋಡಿದರೆ ಒಳ್ಳೆಯದು ಎಂಬ ನಂಬಿಕೆ ಕೂಡಾ ನಮ್ಮಲ್ಲಿದೆ. ಯಾಕೆಂದರೆ, ಅಂಗೈಯಲ್ಲಿ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ನೆಲೆಸಿದ್ದಾರೆ ಎಂಬುದು ನಂಬಿಕೆ. ಇದಲ್ಲದೆ, ಲಕ್ಷ್ಮಿ, ಸರಸ್ವತಿ ಮತ್ತು ಗೌರಿ ಇಲ್ಲಿ ನೆಲೆಯಾಗಿದ್ದಾರೆ ಎಂಬುದು ಕೂಡಾ ನಮ್ಮ ನಂಬಿಕೆ. ಹೀಗಾಗಿ, ಮುಂಜಾನೆ ಎದ್ದ ತಕ್ಷಣ `ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತೀ ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಂ’ ಎಂಬ ಮಂತ್ರವನ್ನು ಪಠಿಸಿದರೂ ಮಂಗಳಕರ ಎಂಬುದು ಪರಿಗಣಿಸಲಾಗುತ್ತದೆ. ಮುಂಜಾನೆ ತಾಳೆಗರಿಗಳನ್ನು ನೋಡುವುದೂ ಶುಭದಾಯಕ.
Leave a Comment