
ರಸ್ತೆಯಲ್ಲಿ ನದಿಯಾಗಿ ಹರಿಯಿತು ರೆಡ್ ವೈನ್ – ಅದೇನಾಯ್ತು ಅಂದ್ರೆ…!!
- ವೈರಲ್ ನ್ಯೂಸ್
- September 13, 2023
- No Comment
- 66
ನ್ಯೂಸ್ ಆ್ಯರೋ : ರೆಡ್ ವೈನ್ ತುಂಬಿದ ಬ್ಯಾರಲ್ ಒಂದು ಸ್ಫೋಟಗೊಂಡು ರಸ್ತೆ ಮೇಲೆ ವೈನ್ ನದಿಯಂತೆ ಹರಿದ ಘಟನೆ ಪೋರ್ಚುಗಲ್ ನ ಸಾವೊ ಲೊರೆಂಕೊ ಡಿ ಬೈರೊ ನಗರದಲ್ಲಿ ನಡೆದಿದೆ.
ಲೆವಿರಾ ಡಿಸ್ಟಿಲರಿ ಎಂಬ ಕಂಪೆನಿಯಿಂದ ಸುಮಾರು 20 ಲಕ್ಷ ಲೀಟರ್ ವೈನ್ ಸಾಗಿಸಲು ಮುಂದಾದಾಗ ಈ ಅವಘಡ ಸಂಭವಿಸಿದ್ದು, ವೈನ್ ನದಿಯಂತೆ ಹರಿದಿದೆ.
ಕಡಿದಾದ ರಸ್ತೆಯಲ್ಲಿ ಬೃಹತ್ ಪ್ರಮಾಣದ ಕೆಂಪು ನೀರು ಹರಿಯುತ್ತಿರುವುದನ್ನು ಕಂಡು ಸ್ಥಳೀಯರ ಆತಂಕಗೊಂಡರು. ಸುಮಾರು ಒಂದು ಒಲಂಪಿಕ್‌ನ ಈಜುಕೊಳ ತುಂಬಬಹುದಾದಷ್ಟು ವೈನ್ ರಸ್ತೆಯಲ್ಲಿ ಹರಿದು ಹೋಗಿದೆ ಎನ್ನಲಾಗಿದೆ.
ಸೆರ್ಟಿಮಾ ನದಿಗೆ ವೈನ್ ಸೇರುವ ಆತಂಕವನ್ನೂ ಸ್ಥಳೀಯರು ವ್ಯಕ್ತಪಡಿಸಿದ್ದು, ಇದಕ್ಕೆ ತಡೆಯೊಡ್ಡುವಂತೆ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಅಗ್ನಿಶಾಮಕ ಸಿಬ್ಬಂದಿ ವೈನ್ ಹರಿವನ್ನು ಬೇರೆಡೆಗೆ ತಿರುಗಿಸಿದ್ದಾರೆ. ರಸ್ತೆ ಮೇಲೆ ಹರಿಯುವುದಕ್ಕೂ ಮೊದಲು ವೈನ್ ಹತ್ತಿರದ ಮನೆಯ ನೆಲಮಾಳಿಗೆಗೆ ಹರಿದಿದೆ ಎನ್ನಲಾಗಿದೆ.
ಘಟನೆ ಕುರಿತು ವೈನ್ ಕಂಪೆನಿ ಕ್ಷಮೆಯಾಚಿಸಿದ್ದು, ಹಾನಿಯ ಎಲ್ಲ ಖರ್ಚು-ವೆಚ್ಚಗಳ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಾಗಿ ತಿಳಿಸಿದೆ.
ರೆಡ್ ವೈನ್ ರಸ್ತೆ ಮೇಲೆ ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಬೃಹತ್ ಪ್ರಮಾಣದ ವೈನ್ ವ್ಯರ್ಥವಾಗಿರುವುದಕ್ಕೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.