ಬಿಗ್ ಬಾಸ್ ಡ್ರೋನ್ ಪ್ರತಾಪ್ ಅರೆಸ್ಟ್; ಈತ ಮಾಡಿದ ತಪ್ಪಾದ್ರೂ ಏನು?
ನ್ಯೂಸ್ ಆ್ಯರೋ: ಡ್ರೋನ್ ಮೂಲಕ ವಿವಾದ ಸೃಷ್ಟಿಸಿ ಬಳಿಕ ಕನ್ನಡ ಬಿಗ್‌ಬಾಸ್ ಮನೆಗೆ ಪ್ರವೇಶ ಮಾಡಿದ್ದ ಡ್ರೋನ್ ಪ್ರತಾಪ್ ಹೊಸ ಅಧ್ಯಾಯ ಆರಂಭಿಸಿದ್ದರು. ಬಿಗ್ ಬಾಸ್ ಮೂಲಕ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದ ಡ್ರೋನ್ ಪ್ರತಾಪ್ ಇದೀಗ ಸೋಡಿಯಂ ಬಳಸಿ ಸ್ಫೋಟ ನಡೆಸಿದ ಪ್ರಕರಣದಲ್ಲಿ ತುಮಕೂರು ಪೊಲೀಸರಿಂದ ಅರೆಸ್ಟ್ ಆಗಿದ್ದಾರೆ. ಭಾರತೀಯ ದಂಡ ಸಂಹಿತೆ ಅಡಿಯ ಸೆಕ್ಷನ್ 288 ಹಾಗೂ ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3ರ ಅಡಿ ಡ್ರೋನ್ ಪ್ರತಾಪ್ ವಿರುದ್ದ ಪ್ರಕರಣ ದಾಖಲಾಗಿದೆ.
ತುಮಕೂರಿನ ಮಿಡಿಗೇಶಿ ಠಾಣ ವ್ಯಾಪ್ತಿಯಲ್ಲಿ ಡ್ರೋನ್ ಪ್ರತಾಪ್ ಸೋಶಿಯಲ್ ಮೀಡಿಯಾದಲ್ಲಿನ ವಿಡಿಯೋಗಾಗಿ ವಿಜ್ಞಾನದ ಕೆಲ ಪ್ರಯೋಗ ಮಾಡಿದ್ದರು. ಕೃಷಿ ಹೊಂಡದಲ್ಲಿನ ನೀರಿನಲ್ಲಿ ಸೋಡಿಯಂ ಬಳಸಿ ಸ್ಫೋಟ ನಡೆಸಿದ್ದರು. ನೀರಿಗೆ ಸೋಡಿಯಂ ಬೆರೆತಾಗ ಹೇಗೆ ಸ್ಫೋಟಗೊಳ್ಳುತ್ತದೆ ಅನ್ನೋ ಪ್ರಯೋಗವನ್ನು ಡ್ರೋನ್ ಪ್ರತಾಪ್ ಮಾಡಿದ್ದರು. ಸೋಡಿಯಂ ಮೆಟಲ್‌ನ್ನು ಕೃಷಿ ಹೊಂಡಕ್ಕೆ ಹಾಕುತ್ತಿದ್ದಂತೆ ಭಾರಿ ಶಬ್ದದೊಂದಿಗೆ ಸ್ಫೋಟಗೊಂಡಿತ್ತು. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಈ ವಿಡಿಯೋ ಭಾರಿ ಟೀಕೆಗೆ ಗುರಿಯಾಗಿತ್ತು. ಪರಿಸರ ಪ್ರೇಮಿಗಳು ಸೇರಿದಂತೆ ಸಾರ್ವಜನಿಕರು ಡ್ರೋನ್ ಪ್ರತಾಪ್ ಹುಚ್ಚಾಟಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಕೃಷಿ ಹೊಂಡದ ನೀರಿಗೆ ಸೋಡಿಯಂ ಹಾಕಿದ್ದಾರೆ. ಸೋಡಿಯಂಗೆ ನೀರು ಸೋಕಿದರೆ ಸ್ಫೋಟಗೊಳ್ಳಲಿದೆ. ಇದನ್ನು ವಿಡಿಯೋಗಾಗಿ ಮಾಡಿ ತೋರಿಸಿದ್ದಾರೆ. ರಾಸಾಯನಿಕ ವಸ್ತುಗಳನ್ನು ನೀರಿಗೆ ಹಾಕಿ ಸ್ಫೋಟ ಮಾಡಿದ ಡ್ರೋನ್ ಪ್ರತಾಪ್ ಅನಾಹುತ ಮಾಡಿದ್ದಾರೆ ಅನ್ನೋ ಆಕ್ರೋಶ ತೀವ್ರವಾಗಿ ಕೇಳಿಬಂದಿತ್ತು.
ಈ ನೀರನ್ನು ಪ್ರಾಣಿ ಪಕ್ಷಿಗಳು ಕುಡಿದರೆ ಗತಿ ಏನು? ಕನಿಷ್ಠ ಜವಾಬ್ದಾರಿ ಇಲ್ಲದೆ ಹುಚ್ಚಾಟ ನಡೆಸಿದ್ದಾರೆ. ಈ ರೀತಿ ಸ್ಫೋಟ ನಡೆಸಲು ಅನುಮತಿ ಪಡೆಯಬೇಕು. ಬೇಕಾದ ಕಡೆ, ಖುಷಿ ಬಂದ ಕಡೆ ಮಾಡುವಂತಿಲ್ಲ. ಕೆಲ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು. ಆದರೆ ಇಲ್ಲಿ ಡ್ರೋನ್ ಪ್ರತಾಪ್ ವಿಡಿಯೋಗಾಗಿ ಈ ರೀತಿ ಹುಚ್ಚಾಟ ಮಾಡಿದ್ದಾರೆ. ಹೀಗಾಗಿ ಪೊಲೀಸರು ಡ್ರೋನ್ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದರು.
ಸೋಡಿಯಂ ಬ್ಲಾಸ್ಟ್‌ನಿಂದ ಕೃಷಿ ಹೊಂಡದಲ್ಲಿರುವ ಜಲಚರಗಳು ಸಾಯುತ್ತದೆ. ಇತ್ತ ಈ ನೀರು ತೀವ್ರ ಸೋಡಿಯಂ ರಾಸಾಯನಿಕದಿಂದ ಕೂಡಿರುವ ಕಾರಣ ವಿಷಕಾರಿಯಾಗಿದೆ. ಇದರ ಕನಿಷ್ಠ ಜ್ಞಾನವಿಲ್ಲದ ಡ್ರೋನ್ ಪ್ರತಾಪ್‌ಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹಲವರು ಆಗ್ರಹಿಸಿದ್ದರು. ವಿಡಿಯೋಗೆ ಭಾರಿ ಟೀಕೆಗಳು ವ್ಯಕ್ತವಾಗುತ್ತಿದ್ದಂತೆ ತುಮಕೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಡ್ರೋನ್ ಪ್ರತಾಪ್ ಬಂಧಿಸಿದ್ದಾರೆ.
Leave a Comment