Viral Video : ಪೊಂಜೊವು ಕೋಲ ಕಟ್ಟುನಡೆ ಮುಟ್ಟ ನಮ ಎತ್ಯ..!! – ದೈವನರ್ತನ ಅನುಕರಿಸಿದ ಮಹಿಳೆಯ ವರ್ತನೆಗೆ ನೆಟ್ಟಿಗರ ಆಕ್ರೋಶ.. : ಆಡಂಬರದ ಹೆಸರಲ್ಲಿ ದೈವಾರಾಧನೆ ದಾರಿ ತಪ್ಪಿತಾ???
ನ್ಯೂಸ್ ಆ್ಯರೋ : ತುಳುನಾಡಿನಲ್ಲಿ ದೈವಾರಾಧನೆ ಅಥವಾ ಭೂತಾರಾಧನೆ ಇಲ್ಲವೇ ನಾಗಾರಾಧನೆಗೆ ಇರುವ ಮಹತ್ವ ತುಳುನಾಡಿನ ಹಿರಿಯರ ಬಾಯಲ್ಲಿ ಕೇಳುವಾಗ ಸಿಗುವ ಧಾರ್ಮಿಕ ಅಭಿಪ್ರಾಯಗಳು ನಮ್ಮನ್ನು ಆಧ್ಯಾತ್ಮಿಕತೆಯೆಡೆಗೆ ಸೆಳೆದುಕೊಂಡು ಹೋಗಿಬಿಡುತ್ತದೆ. ತುಳುನಾಡಿನ ಪ್ರತಿಯೊಂದು ಹಿಂದೂಗಳ ಜಾತಿಯಾಧಾರಿತ ವ್ಯವಸ್ಥೆಯಲ್ಲಿ ಕಾಣ ಸಿಗುವ ಕುಟುಂಬ ಪದ್ಧತಿಯಲ್ಲಿ ಮೂಲಸ್ಥಾನ, ದೈವಗಳ ಗುಡಿಗುಂಡಾರ ಅಥವಾ ದೈವಸ್ಥಾನಗಳಲ್ಲಿ ವರ್ಷಂಪ್ರತಿ ನಡೆಯುವ ಕೋಲಕ್ಕೆ ಪರವೂರಿನಲ್ಲಿದ್ದವರೂ ಕೂಡ ಹಾಜರಾಗಿ ದೈವದ ನುಡಿ ಕೇಳಿ, ದೈವದ ಆಶೀರ್ವಾದ ಪಡೆಯುವುದು ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದ ಸಂಸ್ಕೃತಿ. ಯಾಕೆಂದರೆ ದೇವರು ಕೈಬಿಟ್ಟರೂ ನಂಬಿದ ದೈವ ಕೈಬಿಡಲ್ಲ ಅನ್ನೋ ನಂಬಿಕೆ ತುಳುವರದ್ದು.
ಆಯಾ ಜಾತಿಗೆ ಅನುಗುಣವಾಗಿ ದೈವದ ಸೇವೆಯಲ್ಲಿ ಕೊಂಚ ಬದಲಾವಣೆ ಇದ್ದರೂ ದೈವದ ಮುಂದೆ ನಿಲ್ಲುವ ಪ್ರತಿಯೊಬ್ಬನ ಭಕ್ತಿ ಕೂಡ ನಿಷ್ಕಲ್ಮಶವಾದದ್ದು. ಆ ಭಕ್ತಿಯಲ್ಲಿ ಭಕ್ತನ ಮೇಲೆ ದೈವಕ್ಕಿರುವ ಪ್ರೀತಿ ತಾಯಿಯ ಪ್ರೀತಿಯಂತೆಯೂ ದೈವದ ಮೇಲಿನ ಭಕ್ತನ ಪ್ರೀತಿ, ಭಯ ತಂದೆಯ ಮೇಲೆ ಇರುವಷ್ಟೇ ಗೌರವಾದರಗಳಿಂದ ಕೂಡಿರುವಂತದ್ದು. ಕಾರಣ, ದೈವಕ್ಕೆ ಅಪಚಾರವಾಗದಂತೆ ವರ್ಷಕ್ಕೊಮ್ಮೆ ಕೋಲ ತಂಬಿಲ ನೀಡುವ ಕುಟುಂಬದ ಪ್ರತಿ ಸದಸ್ಯರು ಬಯಸೋದು ತಮ್ಮ ತಮ್ಮ ಕುಟುಂಬದ ಒಳಿತನ್ನು ಮಾತ್ರ. ಆದರೆ ಕಾಲ ಬದಲಾದಂತೆ ಬುದ್ಧಿವಂತರೆನಿಸಿಕೊಂಡವರೇ ದೈವದ ಕಾರಣಿಕ ಮರೆತು ತಾವೇ ಎಲ್ಲಾ ಎಂಬಂತೆ ಬಿಂಬಿಸುವುದು, ದೈವವನ್ನೇ ಅಣಕಿಸಿ ಕುಣಿಯುವುದು ತುಳುನಾಡಿನ ಸಂಸ್ಕೃತಿಯ ಮುಂದುವರಿಕೆಗೆ ಶುಭಸೂಚಕವಲ್ಲ..!
ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಆಟಿದ ಕೂಟ ಕಾರ್ಯಕ್ರಮವೊಂದರಲ್ಲಿ “ವಾ ಪೊರ್ಲುಯ” ಎಂಬ ಹಾಡಿಗೆ ಹಿರಿಯ ವಯಸ್ಸಿನ ಮಹಿಳೆಯೊಬ್ಬರು ದೈವ ನರ್ತನವನ್ನು ಅನುಕರಿಸುವಂತೆ ನರ್ತಿಸಿದ್ದು ನೆಟ್ಟಿಗರನ್ನು ಕೆರಳಿಸಿದೆ. ಕಾರ್ಯಕ್ರಮದ ಸಂಘಟಕರಿಗೂ ಇದು ತಪ್ಪು ಎಂಬುದು ಗೊತ್ತಿರಲೇಬೇಕಿತ್ತು. ಯಾಕೆಂದರೆ ತುಳುನಾಡಿನಲ್ಲೇ ಹುಟ್ಟಿ ಬೆಳೆದವರಿಗೆ ನಮ್ಮ ಸಂಸ್ಕೃತಿಯ ಅಣಕ ಕಣ್ಣಿಗೆ ಕಾಣಿಸಲಿಲ್ಲವೇ? ಅಥವಾ ವೀಕ್ಷಕ ವರ್ಗದವರಿಗಾದರೂ ಇದನ್ನು ತಡೆಯಬಹುದಿತ್ತಲ್ಲವೇ? ಆ ಕೆಲಸವೂ ಆಗಿಲ್ಲ. ವಿಡಿಯೋ ವೈರಲ್ ಆದ ಬಳಿಕವೇ ಈ ದೈವನರ್ತನವನ್ನು ಅಣಕಿಸಿದ ವಿಚಾರ ಬೆಳಕಿಗೆ ಬಂದಿದೆ.
ವಿಡಿಯೋದಲ್ಲಿ ಏನಿದೆ?
2 ನಿಮಿಷ 22 ಸೆಕೆಂಡ್ ಗಳ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, “ಪೊಂಜೊವು ಕೋಲ ಕಟ್ಟುನಡೆ ಮುಟ್ಟ ನಮ ಎತ್ಯ” ಎಂಬ ಒಕ್ಕಣೆಯೊಂದಿಗೆ ವಾಟ್ಸಾಪ್ ನಲ್ಲಿ ವಿಡಿಯೋ ಹರಿದಾಡಿದರೆ, ಫೇಸ್‌ಬುಕ್ ವಾಲ್ ಗಳಲ್ಲಿ, ಇನ್ಸ್ಟಾಗ್ರಾಮ್ ನ ಬಹುಪಾಲು ಎಲ್ಲಾ ತುಳು ಟ್ರೋಲ್ ಪೇಜ್ ಗಳಲ್ಲಿ ಈ ವಿಡಿಯೋ ಶೇರ್ ಆಗಿದ್ದು ಕಾಮೆಂಟ್ ಸೆಕ್ಷನ್ ಗಳಂತೂ ತೀರಾ ಕಳಪೆ ಮಟ್ಟದ ಕಾಮೆಂಟ್ ಗಳಿಗೆ ಸಾಕ್ಷಿಯಾಗುತ್ತಿದೆ.
ಆಡಂಬರದ ನೆಪದಲ್ಲಿ ಹಳಿ ತಪ್ಪಿತಾ ದೈವಾರಾಧನೆ?
ಮೊದಲಿನ ಕಾಲಕ್ಕೆಲ್ಲ ಗ್ಯಾಸ್ ಲೈಟ್ ಬೆಳಕಲ್ಲಿ ಅಥವಾ ದೊಂದಿ ಉರಿಸಿ ನಡೆಯುತ್ತಿದ್ದ ಕೋಲ ಬಳಿಕ ಸಾವಿರಾರು ವಿದ್ಯುತ್ ದೀಪಗಳ ಝಗಮಗಿಸುವಿಕೆಯೊಂದಿಗೆ ವಿಜೃಂಭಿಸುತ್ತಿದೆ. ಭಕ್ತಿಗಿಂತ ಹೆಚ್ಚಾಗಿ ಆಡಂಬರಕ್ಕೆ ಜನ ಮಾರು ಹೋಗುತ್ತಿರುವುದು, ಕೋಲಗಳ ದೃಶ್ಯ ಮೊಬೈಲ್ ಮೂಲಕ ಸೆರೆಹಿಡಿದು ಶೇರ್ ಮಾಡುವುದು ತೀರಾ ಹೆಚ್ಚಾದ ಬಳಿಕ ದೈವದ ಮೇಲಿನ ಭಕ್ತಿ ಕೊಂಚ ಕಡಿಮೆಯಾಗಿದೆ. ಸ್ಥಿತಿವಂತರಾದ ಕೆಲವರಲ್ಲಿ ದೈವ ಭಕ್ತಿ ಕೊಂಚ ಕಡಿಮೆಯೇ ಆಗುತ್ತಿದ್ದು, ಅಲ್ಲಲ್ಲಿ ಆಡಂಬರದ ಕೋಲ ಸೇವೆಗಳಷ್ಟೇ ಗೋಚರವಾಗುತ್ತಿರುವುದು ದುರಂತ.
“ತೋಡ್ ದ ನೀರ್, ಕಾಡ ಪುರ್ಪಗ್ ನೆಲಟ್ ಕಲ್ಲ್ ಪಾಡುದು ನಂಬಿನಲ್ಪ ಒಲಿಯೊಂದಿತ್ತಿನ ದೈವನ್ ಕಾಡ್ ಕಡ್ತ್’ದ್ ಗುಡಿ ಗುಂಡ ಕಟ್ಟಾದ್ ಭಕ್ತಿದ ಪುದರ್ ಡ್ ಏಪ ತುಳುವೆರ್ ಆಡಂಬರ ಸುರು ಮಲ್ತೆರಾ ಆನಿಯೇ ದೈವೊಲೆಗ್ಲಾ ಜನಕ್ಲೆನ ಮಿತ್ತ್’ದ ಪೊಲಬು ಕಮ್ಮಿ ಆತ್ಂಡ್” ಅಂತ ಹೇಳುವ ಹಿರಿಯರ ಕಣ್ಣಲ್ಲಿ ಒಂದಿನಿತು ಕಣ್ಣೀರು ಸೋರುವ ಕಾಲಕ್ಕೆ ಸಾಕ್ಷಿಯಾಗುತ್ತಿದ್ದೇವೆ ನಾವುಗಳು.. ತುಳುನಾಡಿನ ಉಳಿವಿಗಾಗಿ ಹೋರಾಟ ಮಾಡುವ ನಾವುಗಳು ದೈವ ನಡೆ ಮರೆಯದಿರೋಣ ಎಂಬ ಆಶಯ ನಮ್ಮದು…
Leave a Comment