Mangalore : ಇತಿಹಾಸ ಪ್ರಸಿದ್ಧ ಕದ್ರಿ ದೇಗುಲದಲ್ಲಿ ಯುವಕನ ಹುಚ್ಚಾಟ – ಅಣ್ಣಪ್ಪ ದೈವದ ಗುಡಿಯ ಬಾಗಿಲಿಗೆ ಒದ್ದು ಕಡ್ತಲೆ ಹಿಡಿದು ನಿಂತ..!!
ನ್ಯೂಸ್ ಆ್ಯರೋ : ಮಂಗಳೂರಿನ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀಮಂಜುನಾಥ ದೇವಾಲಯದಲ್ಲಿ ಇಂದು ಬೆಳಗ್ಗೆ ಯುವಕನೊಬ್ಬ ದಾಂಧಲೆ ನಡೆಸಿದ್ದಲ್ಲದೆ, ಅಣ್ಣಪ್ಪ ದೈವದ ಕಡ್ತಲೆ ಹಿಡಿದು ಹುಚ್ಚಾಟ ನಡೆಸಿದ್ದು ಪ್ರಾತಃಕಾಲದ ಪೂಜೆಗೆ ಭಂಗ ಎಸಗಿದ್ದಾನೆ.
ಮೊದಲಿಗೆ ಈತ ಬೈಕ್ ಚಲಾಯಿಸಿಕೊಂಡು ನೇರವಾಗಿ ಕದ್ರಿ ದೇವಸ್ಥಾನದ ಪ್ರಾಂಗಣ ಪ್ರವೇಶಿಸಿದ್ದಾನೆ. ಬಳಿಕ ಅಣ್ಣಪ್ಪ ಸ್ವಾಮಿಯ ಗುಡಿಯ ಮುಂದೆ ಹೋಗಿ ಕಾಲಿನಿಂದ ಬಾಗಿಲು ಒದ್ದು ಅಪಚಾರ ಮಾಡಿದ್ದಾನೆ. ಅಷ್ಟೇ ಅಲ್ಲದೆ ಅರ್ಚಕರ ಮೇಲೂ ಹಲ್ಲೆ ನಡೆಸಿ ದೈವದ ಕತ್ತಿಯನ್ನು ಕೈಗೆತ್ತಿಕೊಂಡು ಹುಚ್ಚಾಟ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.
ನಂತರ ದೇವಸ್ಥಾನದ ಮುಂಭಾಗದ ಮಂಟಪದ ಮೇಲೇರಿ ಮಂಟಪದ ಛಾವಣಿಗೂ ಹಾನಿ ಮಾಡಿದ್ದು, ಈತನ ಹುಚ್ಚಾಟದಿಂದ ಅಲ್ಲಿ ಸೇರಿದ್ದ ಅರ್ಚಕರು ಹಾಗೂ ಭಕ್ತರು ಗಾಬರಿಗೊಂಡಿದ್ದಾರೆ.
ಕೊನೆಗೂ ದಾಂಧಲೆ ನಡೆಸಿದ ಯುವಕನನ್ನು ಸೇರಿದ್ದ ಭಕ್ತರು ಹಗ್ಗದಿಂದ ಕಟ್ಟಿಹಾಕಿದ್ದಾರೆ. ಬಳಿಕ ಯುವಕನನ್ನು ಪೊಲೀಸರವಶಕ್ಕೆ ಒಪ್ಪಿಸಲಾಗಿದೆ. ಆ ಯುವಕನ ಮಾಹಿತಿ ಸದ್ಯ ಲಭ್ಯವಾಗಿಲ್ಲ, ಪೊಲೀಸರ ವಿಚಾರಣೆಯ ಬಳಿಕ ಸಮರ್ಪಕ ಮಾಹಿತಿ ಸಿಗಲಿದೆ. ಆದರೆ ಯುವಕನ ರಂಪಾಟದ ಕಾರಣದಿಂದ ದೇವರಿಗೆ ಮುಂಜಾನೆ ನಡೆಯಬೇಕಾಗಿದ್ದ ಪೂಜಾ ಕಾರ್ಯ ಮೊಟಕುಗೊಳಿಸಲಾಗಿದೆ.
Leave a Comment