ಡೊನಾಲ್ಡ್‌ ಟ್ರಂಪ್‌ ಗೆಲುವಿನಿಂದ ಭಾರತಕ್ಕೇನು ಲಾಭ?; ಏನೆಲ್ಲಾ ಅಮೆರಿಕದಿಂದ ಭಾರತ ಬಯಸಬಹುದು ?

Trump
Spread the love

ನ್ಯೂಸ್ ಆ್ಯರೋ: ಡೊನಾಲ್ಡ್‌ ಟ್ರಂಪ್‌ ಅವರು ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದಾಗ ಪಾಕಿಸ್ತಾನಕ್ಕೆ, ಭಯೋತ್ಪಾದನೆಯನ್ನು ಹತ್ತಿಕ್ಕಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು, ಕೇವಲ ಮಾತಿನಲ್ಲಿ ಹೇಳಿದರೆ ಸಾಲದು ಎಂದು ಎಚ್ಚರಿಸಿದ್ದರು. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳನ್ನು ಅಧ್ಯಕ್ಷೀಯ ಅಭ್ಯರ್ಥಿಯಾಗಿ ಟ್ರಂಪ್‌ ಖಂಡಿಸಿದ್ದರು. ಹಿಂದೂಗಳ ರಕ್ಷಣೆಯೂ ಅಗತ್ಯ ಎಂದು ಪ್ರತಿಪಾದಿಸಿದ್ದರು.

ಇನ್ನು ಅಮೆರಿಕದಲ್ಲಿ ಯಾರು ಅಧ್ಯಕ್ಷರಾದರೂ ತೀರಾ ದೊಡ್ಡ ಪರಿಣಾಮ ಬೀರುವುದಿಲ್ಲ. ಹೀಗಿದ್ದರೂ ಟ್ರಂಪ್‌ ಗೆದ್ದರೆ ಕೆಲವನ್ನು ನಿರೀಕ್ಷಿಸಬಹುದು. ಉದಾಹರಣೆಗೆ ಟ್ರಂಪ್‌ ಅವರು ವಿದೇಶದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳಿಗೆ 10% ಆಮದು ಸುಂಕ ವಿಧಿಸಬಹುದು. ಅಲ್ಲಿಗೆ ಭಾರತದಿಂದ ಅಮೆರಿಕಕ್ಕೆ ಹೋಗುವ ಸರಕುಗಳಿಗೆ 10% ಸುಂಕ ತಗಲುತ್ತದೆ. ಇದು ಸಮಸ್ಯಾತ್ಮಕವಾಗಿ ಭಾರತಕ್ಕೆ ಕಾಣಬಹುದು.

ಆದರೆ ಇದೇ ವೇಳೆ ಚೀನಾ ವಿರುದ್ಧ 60% ಆಮದು ಸುಂಕವನ್ನು ಹಾಕಬಹುದು. ಆಗ ಭಾರತಕ್ಕೆ ವಿಶೇಷ ಅವಕಾಶ ಸಿಗಬಹುದು. ಸಾಮಾನ್ಯವಾಗಿ ಚೀನಾ ಅಗ್ಗದ ದರದಲ್ಲಿ ಜಗತ್ತಿಗೇ ವಸ್ತುಗಳನ್ನು ಒದಗಿಸುತ್ತದೆ. ಟ್ರಂಪ್‌ ಈಗ ಚೀನಾಕ್ಕೆ ಹೆಚ್ಚು ಸುಂಕ ವಿಧಿಸಿದ್ರೆ, ಭಾರತಕ್ಕೆ ಹೆಚ್ಚಿನ ವ್ಯಾಪಾರಾವಕಾಶ ಸಿಗಬಹುದು.

ಇನ್ನು ವಲಸೆ ನೀತಿಯನ್ನು ಟ್ರಂಪ್‌ ಬಿಗಿಗೊಳಿಸಬಹುದು. ಕಳೆದ ಸಲ ಕೂಡ ಅವರು ಎಚ್‌ 1 ಬಿ ವೀಸಾ ಬಗ್ಗೆ ನಿರ್ಬಂಧ ಹಾಕಿದ್ದರಿ. ಹೀಗಿದ್ದರೂ, ಭಾರತದಿಂದ ಕಾನೂನುಬದ್ಧವಾಗಿ ವಲಸೆಗಿಂತಲೂ, ಮೆಕ್ಸಿಕೊ ಮತ್ತಿತರ ದೇಶಗಳಿಂದ ಅಕ್ರಮ ವಲಸೆಯನ್ನು ನಿರ್ಬಂಧಿಸುವುದು ಹೆಚ್ಚು. ಹೀಗಿದ್ದರೂ, ಭಾರತೀಯ ಕಂಪನಿಗಳು ಅಲ್ಲಿಯೇ ಘಟಕಗಳನ್ನು ತೆರೆದು ಅಲ್ಲಿನವರಿಗೂ ಉದ್ಯೋಗಾವಕಾಶಗಳನ್ನು ನೀಡಿವೆ. ಹೀಗಾಗಿ ವಲಸೆ ನೀತಿ ಸಮಸ್ಯಾತ್ಮಕವಾಗದು. ತೈಲ ದರ ನಿಯಂತ್ರಣಕ್ಕೆ ಬರಬಹುದು.

ಮೋದಿಯವರು 2014ರಲ್ಲಿ ಪ್ರಧಾನಿಯಾದ ಬಳಿಕ ಇಲ್ಲಿಯವರೆಗೆ ಬರಾಕ್‌ ಒಬಾಮಾ, ಟ್ರಂಪ್‌, ಬೈಡೆನ್‌ ಹೀಗೆ ಎರಡು ಭಿನ್ನ ಪಕ್ಷದ ಅಧ್ಯಕ್ಷರ ಜತೆಗೆ ವ್ಯವಹರಿಸಿದ್ದಾರೆ. ಹೀಗಾಗಿ ಯಾರು ಅಧ್ಯಕ್ಷರಾದರೂ ಮೋದಿಯವರು ಉತ್ತಮ ರೀತಿಯಲ್ಲಿ ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರಿಸಬಲ್ಲರು.

ಉಭಯ ದೇಶಗಳ ನಡುವಿನ ಅತ್ಯಂತ ಜ್ವಲಂತ ಸಮಸ್ಯೆ ಮಾನವ ಹಕ್ಕುಗಳು. ಜಗತ್ತಿನಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವದ ಗುತ್ತಿಗೆದಾರನಾಗಿ ಅಮೆರಿಕ ಉಳಿದಿದೆ. ಇಬ್ಬರು ಅಧ್ಯಕ್ಷೀಯ ಅಭ್ಯರ್ಥಿಗಳು ಈ ವಿಷಯದ ಬಗ್ಗೆ ಸ್ವಲ್ಪ ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ. ಡೊನಾಲ್ಡ್ ಟ್ರಂಪ್ ಮಾನವ ಹಕ್ಕುಗಳ ಬಗ್ಗೆ ಹೆಚ್ಚು ಧ್ವನಿ ಎತ್ತುವುದಿಲ್ಲ. ಅವರು ರಾಷ್ಟ್ರಪತಿಯಾಗಿದ್ದಾಗ, ಭಾರತವು ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ರದ್ದುಗೊಳಿಸಿತ್ತು. ಆ ಸಮಯದಲ್ಲಿ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯು ಸಾಕಷ್ಟು ಸಂಯಮದಿಂದ ಕೂಡಿತ್ತು. ಮತ್ತೊಂದೆಡೆ, ಕಮಲಾ ಹ್ಯಾರಿಸ್ ಮತ್ತು ಅವರ ಡೆಮಾಕ್ರಟಿಕ್ ಪಕ್ಷವು ಪ್ರಜಾಪ್ರಭುತ್ವ ಮತ್ತು ಮಾನವ ಹಕ್ಕುಗಳ ಬಗ್ಗೆ ವಿಶ್ವದ ದೇಶಗಳು ಮತ್ತು ನಾಯಕರಿಗೆ ಸಲಹೆ ನೀಡುತ್ತಲೇ ಇರುತ್ತದೆ.

ಇನ್ನು ಕಮಲಾ ಹ್ಯಾರಿಸ್ ಗೆದ್ದಿದ್ದರೆ, ಅವರು ಪ್ರಸ್ತುತ ಜೋ ಬೈಡೆನ್ ಸರ್ಕಾರದ ನೀತಿಗಳನ್ನು ಮುಂದುವರಿಸುವ ಎಲ್ಲಾ ಸಾಧ್ಯತೆಗಳಿವೆ. ಜೋ ಬೈಡೆನ್ ಸರ್ಕಾರದಲ್ಲಿ ಅವರೇ ಉಪಾಧ್ಯಕ್ಷರಾಗಿದ್ದರು. ಜೋ ಬೈಡೆನ್ ಕೂಡ ಚೀನಾದ ಬಗ್ಗೆ ಕಾಳಜಿ ಹೊಂದಿದ್ದಾರೆ ಆದರೆ ಅವರು ಡೊನಾಲ್ಡ್ ಟ್ರಂಪ್ ಮಟ್ಟಕ್ಕೆ ಹೋಗುವುದಿಲ್ಲ. ಆದಾಗ್ಯೂ, 2020 ರಲ್ಲಿ ಅಧ್ಯಕ್ಷರಾದ ನಂತರ, ಜೋ ಬೈಡೆನ್ ಕ್ವಾಡ್ ನೀತಿಯನ್ನು ಮುಂದುವರೆಸಿದರು. ಅವರು ಕ್ವಾಡ್ ಅನ್ನು ನಾಲ್ಕು ದೇಶಗಳ ನಾಯಕರ ಮಟ್ಟಕ್ಕೆ ಏರಿಸಿದರು.

Leave a Comment

Leave a Reply

Your email address will not be published. Required fields are marked *

error: Content is protected !!