ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಆನೆ ಅಬ್ಬರ; 47ನೇ ಅಧ್ಯಕ್ಷರಾಗಿ ಗೆದ್ದು ಬೀಗಿದ ಟ್ರಂಪ್
ನ್ಯೂಸ್ ಆ್ಯರೋ: ಮಾಜಿ ಅಧ್ಯಕ್ಷ ಟ್ರಂಪ್ ಅವರು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಅದ್ಭುತ ಅಂತರದಲ್ಲಿ ಸೋಲಿಸಿದ್ದಾರೆ. ಈ ಮೂಲಕ 47ನೇ ಅಧ್ಯಕ್ಷರಾಗಿ ಗೆದ್ದು ಬೀಗಿದ್ದಾರೆ.
“ಅಮೆರಿಕಗೆ ಇದು ಸುವರ್ಣಯುಗ ಆಗಲಿದೆ” ಎಂದು ಡೊನಾಲ್ಡ್ ಟ್ರಂಪ್ ಅವರು ಚುನಾವಣಾ ರಾತ್ರಿ ಫ್ಲೋರಿಡಾದ ಪಾಮ್ ಬೀಚ್ನಲ್ಲಿ ಜಮಾಯಿಸಿದ ಬೆಂಬಲಿಗರಿಗೆ ಹೇಳಿದರು. ಶ್ವೇತಭವನದ ಸ್ಪರ್ಧೆಯಲ್ಲಿ ಪ್ರಮುಖ ಗೆಲುವುಗಳನ್ನು ಪಡೆದ ಟ್ರಂಪ್ ತಮ್ಮ ಬೆಂಬಲಿಗರಿಗೆ ಧನ್ಯವಾದ ತಿಳಿಸಿದ್ದಾರೆ. ಟ್ರಂಪ್ ಅವರ ಭಾಷಣವು ಪೂರ್ವಸಿದ್ಧತೆಯಿಲ್ಲದ ಭಾಷಣವಾಗಿತ್ತು, ಈ ವೇಳೆ ಅವರ ಕುಟುಂಬ ಸದಸ್ಯರು ಮತ್ತು ಸಹಾಯಕರು ಭಾಗಿಯಾಗಿದ್ದರು. ಜುಲೈ 13ರ ಹತ್ಯೆಯ ಪ್ರಯತ್ನವನ್ನು ಉಲ್ಲೇಖಿಸಿದ ಟ್ರಂಪ್ ‘ದೇವರು ಒಂದು ಕಾರಣಕ್ಕಾಗಿ ನನ್ನ ಪ್ರಾಣವನ್ನು ಉಳಿಸಿದ್ದಾನೆ’ ಎಂದು ಹೇಳಿದರು.
ಈ ನಡುವೆ, ಡೆಮಾಕ್ರಟಿಕ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಪ್ರಮುಖ ರಾಜ್ಯಗಳಲ್ಲಿ ಹಿನ್ನಡೆ ಅನುಭವಿಸಿರುವ ಕಾರಣ ಚುನಾವಣಾ ರಾತ್ರಿ ಯಾವುದೇ ಸಭೆಯನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಪ್ರಸ್ತುತ, ಟ್ರಂಪ್ 25 ರಾಜ್ಯಗಳಲ್ಲಿ ಮತ್ತು ಕಮಲಾ ಹ್ಯಾರಿಸ್ 16 ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಡೊನಾಲ್ಡ್ ಟ್ರಂಪ್ 270 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಮಲಾ ಹ್ಯಾರಿಸ್ 214 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಗೆಲುವಿಗೆ 270 ಸ್ಥಾನಗಳ ಅವಶ್ಯಕತೆಯಿದ್ದು, ಈ ಸ್ಥಾನಗಳಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ.
ಅಮೆರಿಕದ ಅಧ್ಯಕೀಯ ಚುನಾವಣೆ ಕುರಿತು ಬುಧವಾರ ಸಂಜೆ ಹೊತ್ತಿಗೆ ಸಂಪೂರ್ಣ ಫಲಿತಾಂಶ ಪ್ರಕಟಗೊಳ್ಳಲಿದೆ. ಇದಾದ ನಂತರ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಫ್ಲೋರಿಡಾದಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
Leave a Comment