Mangalore : ಉರ್ವಾಸ್ಟೋರ್ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಕದ್ದು ಮನೆ ಮಾಲಿಕನ ಕಾರಿನಲ್ಲೇ ಪರಾರಿ – ಮೂಲ್ಕಿಯಲ್ಲಿ ಕಾರ್, ಮೊಬೈಲ್ ಪತ್ತೆ ; ಹಲ್ಲೆಯಿಂದ ಗಾಯಗೊಂಡವರು ಆಸ್ಪತ್ರೆಗೆ ದಾಖಲು

ನ್ಯೂಸ್ ಆ್ಯರೋ : ಮಂಗಳೂರಿನಲ್ಲಿ ಮಂಗಳವಾರ (ಇಂದು) ಮುಂಜಾನೆ ಮತ್ತೊಂದು ದರೋಡೆ ಪ್ರಕರಣ ನಡೆದಿದೆ. ಮಂಗಳೂರಿನ ಉರ್ವಸ್ಟೋರ್ ಕೋಟೆಕಣಿ ಒಂದನೇ ಕ್ರಾಸ್ ನ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಇಬ್ಬರಿಗೆ ಹಲ್ಲೆಗೈದು ಚಿನ್ನಾಭರಣ ಕಳವುಗೈದು ಮನೆ ಮಾಲಿಕನ ಕಾರಿನೊಂದಿಗೆ ಪರಾರಿಯಾಗಿದ್ದಾರೆ.
ಮಂಗಳವಾರ ಮುಂಜಾನೆ 3.30 ರ ಸುಮಾರಿಗೆ ನಾಲ್ಕು ಮಂದಿ ದರೋಡೆಕೋರರ ತಂಡವೊಂದು ಉರ್ವ ಕೋಟೆಕಣಿಯ ಬಳಿ ಇರುವ ಮನೆಗೆ ಪ್ರವೇಶಿಸಿದ್ದು ಈ ಮನೆಯಲ್ಲಿ ಹಿರಿಯ ನಾಗರಿಕರಿದ್ದಾರೆ.

ಅವರ ಮಕ್ಕಳು ವಿದೇಶದಲ್ಲಿದ್ದು, ಮನೆ ಮಂದಿಗೆ ಮಾರಕಾಯುಧ ತೋರಿಸಿ ಬೆದರಿಸಿದ್ದಲ್ಲದೇ ಹಲ್ಲೆ ನಡಸಿದ್ದು, ಬಳಿಕ ಚಿನ್ನಾಭರಣ ದರೋಡೆ ಮಾಡಿದ್ದಾರೆ. ಅನಂತರ ಕಾರಿನ ಕೀ ಪಡೆದು ಆ ಕಾರಿನಲ್ಲಿಯೇ ಉಡುಪಿಯತ್ತ ತೆರಳಿದ್ದಾರೆ ಎನ್ನಲಾಗಿದೆ.


ಸದ್ಯ ಮನೆ ಮಾಲೀಕರ ಕಾರು ಮೂಲ್ಕಿಯಲ್ಲಿ ಪತ್ತೆಯಾಗಿದೆ. ಹೆಜಮಾಡಿ ಟೋಲ್ ಗೇಟ್ ಮುನ್ನ ಬಾರ್ & ರೆಸ್ಟೋರೆಂಟ್ ಒಂದರ ಸಮೀಪ ಕಾರು ನಿಲ್ಲಿಸಿದ ತಂಡ ಅವರ ಮತ್ತೊಂದು ಕಾರಿನಲ್ಲಿ ಪರಾರಿಯಾಗಿರುವ ಶಂಕೆಯಿದೆ. ದರೋಡೆ ಮಾಡಿದ ಸೊತ್ತುಗಳ ಮೌಲ್ಯ ಇನ್ನೂ ತಿಳಿದು ಬಂದಿಲ್ಲ.

ಕಾರಿನಲ್ಲಿ ಮೊಬೈಲ್‌ವೊಂದು ಪತ್ತೆಯಾಗಿದ್ದು, ಇದು ಯಾರ ಮೊಬೈಲ್ ಎನ್ನುವುದು ತಿಳಿದು ಬರಬೇಕಿದೆ. ದರೋಡೆಕೋರರು ಮೊಬೈಲನ್ನು ಅವಸರದಲ್ಲೇ ಕಾರಿನಲ್ಲೇ ಬಿಟ್ಟು ಓಡಿ ಹೋಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.


ಉರ್ವ ಪೊಲೀಸರು ಕೋಟೆಕಣಿಯ ಮನೆಗೆ ತೆರಳಿದ್ದು ಪರಿಶೀಲನೆ ಮಾಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಲ್ಕಿ ಪೊಲೀಸರು ಕಾರನ್ನು ಪತ್ತೆ ಹಚ್ಚಿದ್ದು, ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಪೊಲೀಸರು ಮನೆಯ ಸುತ್ತಮುತ್ತ, ರಸ್ತೆ, ಹೆದ್ದಾರಿಯ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದು, ಕಳ್ಳರಿಗಾಗಿ ಪತ್ತೆ ಆರಂಭಿಸಿದ್ದಾರೆ.
Leave a Comment