ಆಡಳಿತದಲ್ಲಿ ದಕ್ಷತೆ ನೀಡಲು ಎಂಟು ಸಂಪುಟ ಸಮಿತಿ ರಚಿಸಿದ ಕೇಂದ್ರ – ಭದ್ರತಾ ಸಮಿತಿಗೆ ಪ್ರಧಾನಿಯೇ ಬಾಸ್..!!
ನ್ಯೂಸ್ ಆ್ಯರೋ : ಸತತ ಮೂರನೇ ಬಾರಿಗೆ ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ವೇಗ ಮತ್ತು ಬದ್ಧತೆ ನೀಡುವ ಸಲುವಾಗಿ ಎಂಟು ಸಂಪುಟ ಸಮಿತಿಗಳನ್ನು ರಚಿಸಿದ್ದಾರೆ.
ನೇಮಕಾತಿಗಳ ಸಂಪುಟ ಸಮಿತಿ, ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ, ಭದ್ರತಾ ಸಂಪುಟ ಸಮಿತಿ ಸೇರಿ 8 ಸಮಿತಿಗಳನ್ನು ರಚಿಸಲಾಗಿದ್ದು, ಭದ್ರತಾ ಸಮಿತಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಮುಖ್ಯಸ್ಥರಾಗಿದ್ದಾರೆ.
ನೇಮಕಾತಿಗಳ ಸಂಪುಟ ಸಭೆಗೆ ನರೇಂದ್ರ ಮೋದಿ ಮುಖ್ಯಸ್ಥರಾದರೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸದಸ್ಯರಾಗಿದ್ದಾರೆ.
ಇನ್ನುಳಿದಂತೆ ವಸತಿ, ಆರ್ಥಿಕ ವ್ಯವಹಾರಗಳು, ಸಂಸದೀಯ ವ್ಯವಹಾರಗಳು, ರಾಜಕೀಯ ವ್ಯವಹಾರಗಳು, ಭದ್ರತೆ, ಹೂಡಿಕೆ ಮತ್ತು ಬೆಳವಣಿಗೆ ಹಾಗೂ ಕೌಶಲ, ಉದ್ಯೋಗ ಹಾಗೂ ಜೀವನೋಪಾಯ ಸಂಪುಟ ಸಮಿತಿಗಳಿಗೂ ಮುಖ್ಯಸ್ಥರು, ಸದಸ್ಯರು ಹಾಗೂ ವಿಶೇಷ ಆಹ್ವಾನಿತರನ್ನು ನರೇಂದ್ರ ಮೋದಿ ಅವರು ನೇಮಿಸಿದ್ದಾರೆ. ಸಚಿವಾಲಯಗಳಿಗೆ ನೇಮಕ, ಪ್ರಮುಖ ತೀರ್ಮಾನ ಸೇರಿ ಹಲವು ನಿರ್ಧಾರಗಳನ್ನು ಸಂಪುಟ ಸಮಿತಿಗಳು ತೆಗೆದುಕೊಳ್ಳಲಿವೆ.
ದೇಶದ ಹಣಕಾಸು, ನೇಮಕಾತಿ, ಭದ್ರತೆ ಸೇರಿ ಹಲವು ವಿಷಯಗಳ ಕುರಿತು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳುವ ದಿಸೆಯಲ್ಲಿ, ಪ್ರಮುಖ ಸಚಿವಾಲಯಗಳ ದಕ್ಷತೆ, ನಿರ್ವಹಣೆ ಮಾಡುವ ದಿಸೆಯಲ್ಲಿ ಸಂಪುಟ ಸಮಿತಿಗಳನ್ನು ರಚಿಸಲಾಗುತ್ತದೆ. ಸಾಮಾನ್ಯವಾಗಿ ಮೂರರಿಂದ ಎಂಟು ಸಂಪುಟ ಸಮಿತಿಗಳನ್ನು ರಚಿಸಲಾಗುತ್ತದೆ. ಯಾವುದೇ ನೂತನ ಸರ್ಕಾರ ರಚನೆಯಾದ ಬಳಿಕ ಪ್ರಧಾನಮಂತ್ರಿಯೇ ಸಮಿತಿಗಳನ್ನು ರಚಿಸುತ್ತಾರೆ. ಸಮಿತಿಗಳಿಗೆ ಸದಸ್ಯರು ಅಥವಾ ಮುಖ್ಯಸ್ಥರನ್ನು ಕೂಡ ಪ್ರಧಾನಿ ಆಯ್ಕೆಯಾಗಿರುತ್ತದೆ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ 12 ಸಮಿತಿಗಳನ್ನು ರಚಿಸಿದ್ದರು.
Leave a Comment