ಕಾಂಗ್ರೆಸ್‌ ಪಕ್ಷಕ್ಕೆ ಬಿಗ್‌ ಶಾಕ್ ಕೊಟ್ಟ ಕೋರ್ಟ್; ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಮಾಜಿ ಸಂಸದನಿಗೆ ಜೈಲೇ ಗತಿ

Sajjan Kumar
Spread the love

ನ್ಯೂಸ್ ಆ್ಯರೋ: ಸಿಖ್ ವಿರೋಧಿ ದಂಗೆಯ ಸಂದರ್ಭದಲ್ಲಿ ಸರಸ್ವತಿ ವಿಹಾರ್ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮಾಜಿ ಸಂಸದ ಸಜ್ಜನ್ ಕುಮಾರ್ ದೋಷಿ ಎಂದು ದೆಹಲಿ ನ್ಯಾಯಾಲಯ ಬುಧವಾರ ತೀರ್ಪು ನೀಡಿದೆ.

ಶಿಕ್ಷೆಯ ಆದೇಶ ಹೊರಡಿಸಿದ ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ, ಫೆಬ್ರವರಿ 18ರಂದು ಶಿಕ್ಷೆಯ ಪ್ರಮಾಣದ ಬಗ್ಗೆ ವಿಚಾರಣೆ ನಡೆಸುವುದಾಗಿ ಪ್ರಕಟಿಸಿದರು. ತಿಹಾರ್ ಜೈಲಿನಲ್ಲಿರುವ ಕುಮಾರ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

1984ರ ನವೆಂಬರ್ 1ರಂದು ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣ್ ದೀಪ್ ಸಿಂಗ್ ಎಂಬವರ ಹತ್ಯೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಆರಂಭದಲ್ಲಿ ಪಂಜಾಬಿ ಬಾಗ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ, ನಂತರ ವಿಶೇಷ ತನಿಖಾ ತಂಡವು ತನಿಖೆಯನ್ನು ವಹಿಸಿಕೊಂಡಿತು. ಮೇಲ್ನೋಟಕ್ಕೆ ಆರೋಪಗಳು ಸತ್ಯ ಎಂದು ಕಂಡು ಬಂದ ನಂತರ ಡಿಸೆಂಬರ್ 16, 2021ರಂದು ನ್ಯಾಯಾಲಯವು ಕುಮಾರ್ ವಿರುದ್ಧ ಆರೋಪಗಳನ್ನು ರೂಪಿಸಿತ್ತು.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಗೆ ಪ್ರತೀಕಾರವಾಗಿ ಮಾರಕಾಸ್ತ್ರಗಳನ್ನು ಹೊಂದಿದ್ದ ಬೃಹತ್ ಗುಂಪು ದೊಡ್ಡ ಪ್ರಮಾಣದ ಲೂಟಿ, ಅಗ್ನಿಸ್ಪರ್ಶ ಮಾಡಿ ಸಿಖ್ಖರ ಆಸ್ತಿಪಾಸ್ತಿಗಳನ್ನು ನಾಶಪಡಿಸಿತ್ತು. ದೂರುದಾರ, ಜಸ್ವಂತ್ ಅವರ ಪತ್ನಿಯ ಮನೆಯ ಮೇಲೆ ದಾಳಿ ನಡೆಸಿದ ಗುಂಪು ಪತಿ ಮತ್ತು ಮಗನನ್ನು ಕೊಂದು ಹಾಕಿತ್ತು. ಅಲ್ಲದೆ ವಸ್ತುಗಳನ್ನು ಲೂಟಿ ಮಾಡಿತ್ತು ಮತ್ತು ಅವರ ಮನೆಗೆ ಬೆಂಕಿ ಹಚ್ಚಿತ್ತು ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.

ಸಜ್ಜನ್ ಕುಮಾರ್ ಅವರು ಈ ಗುಂಪಿನ ಭಾಗವಾಗಿದ್ದರು ಮಾತ್ರವಲ್ಲದೇ, ಗುಂಪಿನ ನೇತೃತ್ವವನ್ನೂ ವಹಿಸಿದ್ದರು ಎಂಬುದಕ್ಕೆ ಸಾಕಷ್ಟು ಪುರಾವೆಗಳು ಕಂಡು ಬಂದಿವೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.

Leave a Comment

Leave a Reply

Your email address will not be published. Required fields are marked *