Mangalore : ಕಾಂಗ್ರೆಸ್ ಮುಖಂಡ ಐವಾನ್ ಮನೆ ಮೇಲೆ ಕಲ್ಲು ತೂರಾಟ – ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಕೃತ್ಯ ಶಂಕೆ
ನ್ಯೂಸ್ ಆ್ಯರೋ : ರಾಜ್ಯಪಾಲರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ನಾಯಕ, ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ಮಂಗಳೂರು ನಗರದ ವೆಲೆನ್ಸಿಯಾ ದಲ್ಲಿರುವ ಐವಾನ್ ಡಿಸೋಜ ಮನೆ ಮೇಲೆ ಕಲ್ಲು ತೂರಾಟ ನಡೆದಿದ್ದು, ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ ಎನ್ನಲಾಗಿದೆ.
ಮೂಡ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು, ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಐವಾನ್ ಡಿಸೋಜಾ ಹೇಳಿಕೆ ನೀಡಿದ್ದರು. ಬಾಂಗ್ಲಾದಲ್ಲಿ ನಡೆದಂತೆ ರಾಜ್ಯಪಾಲರ ನಿವಾಶಕ್ಕೆ ನುಗ್ಗಿ ಅವರನ್ನು ಓಡಿಸಲಾಗುವುದು ಎಂಬರ್ಥ ಬರುವಂತೆ ನೀಡಿದ್ದ ಹೇಳಿಕೆಗೆ ವ್ಯಾಪಕವಾಗಿ ಅಸಮಧಾನ ವ್ಯಕ್ತವಾಗಿತ್ತು. ಈ ಬಗ್ಗೆ ಬಿಜೆಪಿ ಐವಾನ್ ಡಿಸೋಜಾರ ವಿರುದ್ದ ದೂರನ್ನೂ ದಾಖಲಿಸಿತ್ತು.
ತಮ್ಮ ಹೇಳಿಕೆ ಬಗ್ಗೆ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿರುವ ಐವಾನ್ ಡಿಸೋಜ ಅವರು, ರಾಜ್ಯಪಾಲರು ಸಿಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿದ್ದಾರೆ. ಇದರ ವಿರುದ್ಧ ಪ್ರತಿಭಟನೆ ಇತ್ತು, ಸಂವಿಧಾನ ಬದ್ಧ ಅಧಿಕಾರ ಇರುವವರು ಸರಿಯಾಗಿ ತೀರ್ಮಾನ ಮಾಡಬೇಕು. ಕಾನೂನನ್ನು ಸರಿಯಾಗಿ ಪಾಲನೆ ಮಾಡದಿದ್ದರೆ ಬಾಂಗ್ಲಾದೇಶದ ರೀತಿಯಲ್ಲಿ ಘಟನೆ ನಡೆಯುತ್ತೆ. ಇದನ್ನ ನಾನು ಉದಾಹರಣೆಯಾಗಿ ಹೇಳಿಕೆ ನೀಡಿದ್ದೇನೆ ಅಷ್ಟೇ. ಅಂತಹ ಪರಿಸ್ಥಿತಿ ತರಿಸಿಕೊಳ್ಳುವುದು ಬೇಡ ಅಂತ ಹೇಳಿದ್ದೇನೆ ಎಂದಿದ್ದರು.
ಆದರೆ ಕಳೆದ ರಾತ್ರಿ ಐವಾನ್ ಡಿಸೋಜಾ ಮನೆ ಮೇಲೆ ಕಲ್ಲು ತೂರಾಟ ನಡೆದಿದ್ದು ಹೇಳಿಕೆಯ ಹಿನ್ನೆಲೆಯಲ್ಲೇ ಕಲ್ಲು ತೂರಾಟ ನಡೆದಿರುವ ಶಂಕೆ ವ್ಯಕ್ತವಾಗಿದೆ. ಐವಾನ್‌ರ ಮನೆಯ ಕಿಟಕಿಯ ಫ್ರೇಮ್‌ಗೆ ಕಲ್ಲು ಬಿದ್ದಿದ್ದು, ಯಾವುದೇ ಹಾನಿಯಾಗಿಲ್ಲ ಎನ್ನಲಾಗಿದೆ. ಘಟನೆ ನಡೆದ ಬಳಿಕ ಪಾಂಡೇಶ್ವರ ಪೋಲಿಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
Leave a Comment