
ಕೇರಳದಲ್ಲಿ ನಿಫಾ ವೈರಸ್ ಹಾವಳಿ – ದಕ್ಷಿಣ ಕನ್ನಡ ಗಡಿಭಾಗದಲ್ಲಿ ತಪಾಸಣೆ, ಎಲ್ಲೆಲ್ಲಿ ನಡೆಯುತ್ತೆ?
- ಕರ್ನಾಟಕ
- September 17, 2023
- No Comment
- 33
ನ್ಯೂಸ್ ಆ್ಯರೋ : ಕೇರಳದಲ್ಲಿ ಮಾರಣಾಂತಿಕ ನಿಫಾ ವೈರಸ್ ಕಂಡು ಬಂದಿದ್ದು, ರಾಜ್ಯದೊಂದಿಗೆ ಗಡಿ ಹಂಚಿಕೊಂಡಿರುವ ಕರ್ನಾಟಕದಲ್ಲೂ ಈ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ. ಈಗಾಗಲೇ ಅನಗತ್ಯವಾಗಿ ಕೇರಳ ಪ್ರವಾಸ ಕೈಗೊಳ್ಳಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದ್ದು, ಇತ್ತ ಕೇರಳ-ಕರ್ನಾಟಕ ಗಡಿಗಳಲ್ಲಿ ತಪಾಸಣೆ ನಡೆಸಲಾಗುತ್ತಿದೆ. ಕೇರಳದ ವಡಗರ, ಕೋಯಿಕ್ಕೋಡ್ ನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವ ವಾಹನಗಳನ್ನು 11 ಕಡೆ ತಪಾಸಣೆ ನಡೆಸಲಾಗುತ್ತಿದೆ.
ತಾಪಮಾನ ಪರೀಕ್ಷೆ
ಇನ್ನು ದಕ್ಷಿಣ ಕನ್ನಡ ಜಿಲ್ಲೆಯ 4 ಗಡಿಭಾಗಗಳಲ್ಲಿ ಜನರ ತಾಪಮಾನ ಪರೀಕ್ಷಿಸಲು ತಂಡಗಳನ್ನು ಸಿದ್ಧಪಡಿಸಲಾಗಿದೆ. ಇಂದಿನಿಂದ (ಸೆ. 17) ಈ ಎಲ್ಲಾ ತಂಡಗಳು ಕಾರ್ಯ ನಿರ್ವಹಿಸಲಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ?
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗದ ಜಾಲ್ಸೂರು, ಮಂಡೆಕೋಲು, ಬಡ್ಡಡ್ಕ, ಪುತ್ತೂರಿನ ಸ್ವರ್ಗ, ಮೇನಾಲ, ಸುಳ್ಯಪದವು, ಬಂಟ್ವಾಳ ಭಾಗದ ಸಾರಡ್ಕ, ಸಾಲೆತ್ತೂರು, ಕನ್ಯಾನ, ಬೀರಿಪದವು ಮತ್ತು ಮಂಗಳೂರಿನ ತಲಪಾಡಿಯಲ್ಲಿ ಜನರ ತಾಪಮಾನ ಪರೀಕ್ಷೆ ನಡೆಸಲಾಗುವುದು.
ತಪಾಸಣೆ ವೇಳೆ ಜ್ವರದ ಲಕ್ಷಣ ಕಂಡುಬಂದರೆ ಆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ ಚಿಕಿತ್ಸೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ. ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಯಲಿದೆ.
ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೆ ರೋಗ ಲಕ್ಷಣ ಪತ್ತೆಯಾದರೆ ಅವರ ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆಸ್ಪತ್ರೆ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ನಿಗಾ ಕೊಠಡಿ (ಐಸೊಲೇಶನ್ ವಾರ್ಡ್) ಯನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮಧ್ಯೆ ತಲಪಾಡಿಯಲ್ಲಿ ದ.ಕ. ಜಿಲ್ಲಾ ಸರ್ವೇಕ್ಷಣಾದಿಕಾರಿ ನೇತೃತ್ವದಲ್ಲಿ ರ್ಯಾಂಡಂ ಫೀವರ್ ಸರ್ವೇ ನಡೆಸಲಾಗಿದೆ. ಶನಿವಾರ ಕೋಯಿಕ್ಕೋಡ್ ಮತ್ತು ವಡಗರಗಳಿಂದ ಆಗಮಿಸಿದ ಸುಮಾರು 70 ವಾಹನಗಳ ತಪಾಸಣೆ ನಡೆಸಿ ಪ್ರಯಾಣಿಕರ ದೂರವಾಣಿ ಸಂಖ್ಯೆಯನ್ನು ಪಡೆದು ಪ್ರಯಾಣ ಮುಂದುವರಿಸಲು ಅನುಮತಿ ನೀಡಲಾಯಿತು.