
Koppa : 750 ರೂ. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡ 9ನೇ ತರಗತಿ ವಿದ್ಯಾರ್ಥಿ – ಸಾವಿನ ಸುತ್ತ ಅನುಮಾನದ ಹುತ್ತ..!!
- ಕರ್ನಾಟಕ
- August 29, 2023
- No Comment
- 114
ನ್ಯೂಸ್ ಆ್ಯರೋ : ಇತ್ತೀಚೆಗೆ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪಾಲಕರಲ್ಲಿ ಆತಂಕ ಮೂಡಿಸಿದೆ. ಅದರಲ್ಲೂ ಕ್ಷುಲ್ಲಕ ಕಾರಣಗಳಿಗೆ ವಿದ್ಯಾರ್ಥಿಗಳು ಸಾವಿಗೆ ಶರಣಾಗುತ್ತಿದ್ದಾರೆ. ಪಾಲಕರು ಬೈದರು, ಮೊಬೈಲ್ ಕೊಡಲಿಲ್ಲ ಮುಂತಾದ ಚಿಕ್ಕ ಪುಟ್ಟ ಕಾರಣಗಳೇ ಆತ್ಮಹತ್ಯೆಯಂತಹ ದೊಡ್ಡ ದುಡುಕಿನ ನಿರ್ಧಾರಕ್ಕೆ ಕಾರಣವಾಗುತ್ತಿರುವುದು ನಿಜಕ್ಕೂ ಆಲೋಚಿಸಬೇಕಾದ ವಿಚಾರ ಎಂದು ಮಾನಸಿಕ ತಜ್ಞರು ಹೇಳುತ್ತಾರೆ. ಈಗ ಅಂತಹದ್ದೇ ಪ್ರಕರಣವೊಂದು ಚರ್ಚೆ ಹುಟ್ಟುಹಾಕಿದೆ.
ಕೇವಲ 750 ರೂ. ಸಾಲ ತೀರಿಸಲಾಗದೆ ಆತ್ಮಹತ್ಯೆ?
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಶ್ರೀನಿವಾಸ್ ಆಗಸ್ಟ್ 22ರಂದು ಹಾಸ್ಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಡೆತ್ ನೋಟ್ ನಲ್ಲಿ ಸಾಲ ಪಡೆದುಕೊಂಡಿದ್ದ 750 ರೂ. ಮರಳಿ ನೀಡಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಶ್ರೀನಿವಾಸ್ ಬರೆದುಕೊಂಡಿದ್ದ.
ಕಡೂರು ತಾಲೂಕಿನ ಹಿರೇಬಳ್ಳೇಕೆರೆ ಗ್ರಾಮದ ಮಾಜಿ ಯೋಧಯೊಬ್ಬರ ಪುತ್ರನಾಗಿರುವ ಶ್ರೀನಿವಾಸ್ ಸಾವಿನ ಪ್ರಕರಣ ಇದೀಗ ಚರ್ಚೆಗೆ ಗ್ರಾಸವಾಗಿದೆ. ಶ್ರೀನಿವಾಸ್ ಪಾಲಕರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ತನಿಖೆಗೆ ಆಗ್ರಹಿಸಿದ್ದಾರೆ.

ಶ್ರೀನಿವಾಸ್ ತಂದೆ ಹೇಳಿದ್ದೇನು?
ಶ್ರೀನಿವಾಸ್ ತಂದೆ ಮಾತನಾಡಿ, 750 ರೂ. ಸಾಲಕೊಟ್ಟು ಹಾಸ್ಟೆಲ್ ಸಿಬ್ಬಂದಿ 3 ಸಾವಿರ ರೂ. ಕೇಳಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಶಾಲೆ ಈ ಕುರಿತು ಸೂಕ್ತವಾಗಿ ಸ್ಪಂದಿಸಿಲ್ಲ. ಅಲ್ಲದೆ ಸೀರೆ ಬಳಸಿ ಆತ್ಮಹತ್ಯೆ ಮಾಡಿಕೊಳ್ಳಲಾಗಿದ್ದು, ಆತನಿಗೆ, ಅದೂ ಹಾಸ್ಟೆಲ್ ನಲ್ಲಿ ಸೀರೆ ಎಲ್ಲಿಂದ ಸಿಕ್ಕಿತು? ಎಂದು ಪ್ರಶ್ನಿಸಿದ್ದಾರೆ.
ನಾವು ಹೋದಾಗ 50-60 ವಿದ್ಯಾರ್ಥಿಗಳ ಪೈಕಿ ಒಬ್ಬರೂ ಹಾಸ್ಟೆಲ್ ನಲ್ಲಿರಲಿಲ್ಲ. ಅವರೆಲ್ಲ ಎಲ್ಲಿಗೆ ಹೋಗಿದ್ದರು? ವಾರ್ಡನ್ ಐಷರಾಮಿ ಕೋಣೆಯಲ್ಲಿ ವಾಸಿಸುತ್ತಾರೆ. ಅಲ್ಲದೆ ಕೋಣೆ 25 ಅಡಿ ಎತ್ತರವಿದೆ. ಈ ಹುಡುಗನಿಗೆ ಅಷ್ಟು ಎತ್ತರ ನಿಲುಕಿದ್ದು ಹೇಗೆ? ಈ ಎಲ್ಲಾ ಅನುಮಾನಗಳಿಗೆ ಉತ್ತರ ಸಿಗಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ಈ ರೀತಿ ಬೇರೆ ಯಾರಿಗೂ ಆಗಬಾರದು. ನಮಗೆ ನ್ಯಾಯ ಸಿಗಬೇಕು. ಮಾಜಿ ಯೋಧರ ಸಂಘ ಇದಕ್ಕೆ ಸ್ಪಂದಿಸಿ ನ್ಯಾಯ ಕೊಡಿಸಲು ಶ್ರಮಿಸಬೇಕು ಎಂದು ಕೈ ಮುಗಿದು ಬೇಡಿಕೊಂಡಿದ್ದಾರೆ.