Yuvraj Singh : ತೆರೆ ಮೇಲೆ ಬರಲಿದೆ ಸ್ಟಾರ್ ಆಟಗಾರನ ರಿಯಲ್ ಲೈಫ್ ಸ್ಟೋರಿ ‌- ಸಿಕ್ಸರ್ ಕಿಂಗ್ ಯುವಿ ಚಿತ್ರಕ್ಕೆ ಅಭಿಮಾನಿಗಳ ಕಾತರ

Spread the love

ನ್ಯೂಸ್ ಆ್ಯರೋ : ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಅಲ್ರೌಂಡರ್, ಅವಳಿ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯುವರಾಜ್ ಸಿಂಗ್ ಜೀವನವನ್ನಾಧರಿಸಿ ಚಿತ್ರ ನಿರ್ಮಿಸಲು ಟಿ-ಸಿರೀಸ್ ಸಂಸ್ಥೆ ಮುಂದಾಗಿದೆ.

ಇತ್ತೀಚೆಗಷ್ಟೇ ನಿರ್ಮಾಪಕರಾದ ಭೂಷಣ್ ಕುಮಾರ್ ಹಾಗೂ ರವಿ ಯುವರಾಜ್ ಸಿಂಗ್ ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಇದಕ್ಕೆ ಯುವಿ ಒಪ್ಪಿಗೆ ನೀಡಿದ ಬೆನ್ನಲ್ಲೇ ಸಿನಿಮಾ ಘೋಷಿಸಲಾಗಿದೆ.

‘ನನ್ನ ಬದುಕಿನ ಕಥೆಯನ್ನು ಲಕ್ಷಾಂತರ ಅಭಿಮಾನಿಗಳಿಗೆ ತೋರಿಸಲು ಮುಂದೆ ಬಂದಿರುವ ಭೂಷಣ್ ಹಾಗೂ ರವಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ಜೀವನದ ಎಲ್ಲ ಏರಿಳಿತಗಳ ಮಧ್ಯೆ ಕ್ರಿಕೆಟ್‌ಅನ್ನು ಪ್ರೀತಿಸುತ್ತೇನೆ. ಈ ಸಿನಿಮಾ ಇಂದಿನ ಯುವಕರಿಗೆ ಸ್ಫೂರ್ತಿಯಾಗಲಿದ್ದು, ಜತೆಗೆ ಸವಾಲುಗಳನ್ನು ಜಯಿಸಲು, ಕಂಡ ಕನಸನ್ನು ಈಡೇರಿಸಿಕೊಳ್ಳಲು ಮಾದರಿಯಾಗಲಿದೆ’ ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

2000ರಲ್ಲಿ ಕೀನ್ಯಾದ ಎದುರು ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಯುವರಾಜ್, ಭಾರತ ತಂಡ 2007ರ ಟಿ-20 ವಿಶ್ವಕಪ್ ಹಾಗೂ 2011ರ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಟಿ-20 ವಿಶ್ವಕಪ್‌ನಲ್ಲಿ ಆರು ಬಾಲ್‌ಗೆ ಆರು ಸಿಕ್ಸ್ ಬಾರಿಸುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದರು. ಈ ನಡುವೆ ಕ್ಯಾನ್ಸರ್‌ಗೆ ತುತ್ತಾಗಿದ್ದ ಯುವಿ ಮೈದಾನದಾಚೆಗೂ ಹೋರಾಟ ನಡೆಸಿ ಗುಣಮುಖರಾಗಿದ್ದರು. ಕೊನೆಗೆ 2017ರಲ್ಲಿ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರು.

17 ವರ್ಷಗಳ ಕ್ರೀಡಾ ಬದುಕಿನಲ್ಲಿ ಯುವರಾಜ್ ಹಲವಾರು ಏಳು-ಬೀಳುಗಳನ್ನು ಕಂಡು ಆದರ್ಶವಾಗಿದ್ದಾರೆ. ಇಂತಹ ಶ್ರೇಷ್ಠ ಆಟಗಾರನ ಬದುಕು, ಮಹತ್ವದ ಪಂದ್ಯಗಳು, ಅವಳಿ ವಿಶ್ವಕಪ್‌ನಲ್ಲಿ ವಹಿಸಿದ ಪ್ರಮುಖ ಪಾತ್ರದ ಜತೆಗೆ ಅತಿಮುಖ್ಯವಾಗಿ ಕ್ಯಾನ್ಸರ್ ವಿರುದ್ಧ ನಡೆಸಿದ ಹೋರಾಟದ ಸುತ್ತ ಈ ಸಿನಿಮಾ ಮೂಡಿಬರಲಿದೆ. ಚಿತ್ರದ ತಾರಾಗಣ, ತಾಂತ್ರಿಕ ವಿಭಾಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದ್ದು, ತಮ್ಮ‌ ನೆಚ್ಚಿನ ಆಟಗಾರನ ಜೀವನಾಧಾರಿತ ಚಿತ್ರಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Leave a Comment

Leave a Reply

Your email address will not be published. Required fields are marked *