ತಂದೆ ಮೃತದೇಹ ತುಂಡು ಮಾಡುವಂತೆ ಅಣ್ಣ-ತಮ್ಮ ಪಟ್ಟು; ಅಂತ್ಯಸಂಸ್ಕಾರದ ವೇಳೆ ಸಹೋದರರ ಫೈಟ್
ನ್ಯೂಸ್ ಆ್ಯರೋ: ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಅನ್ನೋದು ಗಾದೆಮಾತು. ಅದೆಷ್ಟೋ ಅಣ್ಣ ತಮ್ಮಂದಿರು ಶತ್ರುಗಳಂತೆ ಕಾದಾಡಿದ್ದು ಇದೆ. ಆದರೆ ಇದನ್ನೂ ಮೀರಿಸುವಂತೆ ತಂದೆ ಸಾವಿನಲ್ಲೂ ಅಣ್ಣ ತಮ್ಮಂದಿರು ಶತ್ರುಗಳಿಗಿಂತ ಹೀನಾಯವಾಗಿ ಜಿದ್ದಿಗೆ ನಿಂತಿದ್ದಾರೆ. ತಂದೆ ಅಂತ್ಯಕ್ರಿಯೆಯಲ್ಲಿ ಅಣ್ಣ ತಮ್ಮಂದಿರ ಮಧ್ಯೆ ಜಗಳವಾಡಿದ್ದು, ಕೊನೆಗೆ ವಿಕೋಪಕ್ಕೆ ಹೋಗಿದೆ. ಈ ವೇಳೆ ತಂದೆಯ ಮೃತದೇಹವನ್ನೂ ಭಾಗಮಾಡುವಂತೆ ಹೇಳಿದ್ದಾರೆ. ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಇಂಥದ್ದೊಂದು ಅಮಾನವೀಯ ಘಟನೆ ನಡೆದಿದೆ.
ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ತಮ್ಮ ತಂದೆಯ ಅಂತ್ಯಕ್ರಿಯೆಗಾಗಿ ಇಬ್ಬರು ಸಹೋದರರು ಜಗಳವಾಡಿದ್ದಾರೆ. ಈ ವೇಳೆ ಜಗಳ ವಿಕೋಪಕ್ಕೆ ಹೋಗಿದ್ದು, ಈ ಪೈಕಿ ಒಬ್ಬಾತ ತಮ್ಮ ತಂದೆಯ ದೇಹವನ್ನು ಅರ್ಧದಷ್ಟು ಕತ್ತರಿಸಿ ಸಹೋದರರ ನಡುವೆ ಪಾಲು ಮಾಡಿ, ಪ್ರತ್ಯೇಕ ಅಂತ್ಯಕ್ರಿಯೆಗಳನ್ನು ನಡೆಸಬೇಕೆಂದು ಪಟ್ಟು ಹಿಡಿದಿದ್ದಾನೆ.
ಜಿಲ್ಲಾ ಕೇಂದ್ರದಿಂದ 45 ಕಿ.ಮೀ ದೂರದಲ್ಲಿರುವ ಲಿಧೋರಟಾಲ್ ಗ್ರಾಮದಲ್ಲಿ ಈ ಗಲಾಟೆ ನಡೆದಿದೆ ಎಂದು ಪೊಲೀಸರು ಪಿಟಿಐಗೆ ತಿಳಿಸಿದ್ದಾರೆ. ಸಹೋದರರ ನಡುವಿನ ಜಗಳದ ನಂತರ ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ. ನೀಡಿದ್ದಾರೆ ಎಂದು ಜಾತಾರಾ ಪೊಲೀಸ್ ಠಾಣೆಯ ಉಸ್ತುವಾರಿ ಅರವಿಂದ್ ಸಿಂಗ್ ಡಾಂಗಿ ಹೇಳಿದ್ದಾರೆ.
84 ವರ್ಷದ ಧ್ಯಾನಿ ಸಿಂಗ್ ಘೋಷ್ ಎಂಬುವರು ಸಾವನ್ನಪ್ಪಿದ್ದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಿರಿಯ ಮಗ ಕಿಶನ್ ಸಿಂಗ್, 2ನೇ ಮಗ ದೇಶರಾಜ್ ಸಿಂಗ್. ಈ ಪೈಕಿ ಎರಡನೇ ಮಗ ದೇಶರಾಜ್ ಜೊತೆ ತಂದೆ ಧ್ಯಾನಿ ಸಿಂಗ್ ಘೋಷ್ ವಾಸಿಸುತ್ತಿದ್ದರು. ಇನ್ನು ಹಿರಿಯ ಮಗ ಕಿಶನ್ ಸಿಂಗ್ ಹಾಗೂ 2ನೇ ಮಗ ದೇಶರಾಜ್ ಸಿಂಗ್ ನಡುವೆ ಯಾವಾಗಲೂ ಜಗಳ ನಡೆಯುತ್ತಿತ್ತಂತೆ.
ಧ್ಯಾನಿ ಸಿಂಗ್ ಘೋಷ್ ಪಟ್ಟಣದ ಹೊರವಲಯದಲ್ಲಿದ್ದ ತಮ್ಮ ಕಿರಿಯ ಮಗ ದೇಶರಾಜ್ ಮನೆಯಲ್ಲಿದ್ದಾಗಲೇ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಈ ವೇಳೆ ವಿಷಯ ತಿಳಿಯುತ್ತಿದ್ದಂತೆ ಹಿರಿಯ ಮಗ ಕಿಶನ್ ತನ್ನ 2ನೇ ಸಹೋದರನ ಮನೆಗೆ ಬಂದಿದ್ದಾನೆ. ತಾನೇ ತನ್ನ ತಂದೆಯ ಅಂತ್ಯಕ್ರಿಯೆಯನ್ನು ಮಾಡುವುದಾಗಿ ಹೇಳಿ ಗಲಾಟೆ ಮಾಡಿದ್ದಾನೆ. ಆದರೆ ಇದಕ್ಕೆ ಕಿರಿಯ ಮಗ ವಿರೋಧ ವ್ಯಕ್ತಪಡಿಸಿದ್ದಾನೆ. ತಾನೇ ಶವಸಂಸ್ಕಾರವನ್ನು ನಡೆಸುವುದು ತನ್ನ ಮೃತ ತಂದೆಯ ಬಯಕೆಯಾಗಿತ್ತು ಅಂತ ಹೇಳಿದ್ದಾನೆ.
ಈ ಬಗ್ಗೆ ಇಬ್ಬರು ಪುತ್ರರ ನಡುವೆ ತೀವ್ರ ವಾಗ್ವಾದ ನಡೆಯಿತು. ಕೊನೆಗೆ ಜಗಳವು ವಿಭಿನ್ನ ತಿರುವು ಪಡೆದುಕೊಂಡಿತು. ಕೊನೆಗೆ ಮೃತ ತಂದೆಯ ಮೃತ ದೇಹವನ್ನು ಎರಡು ಭಾಗಗಳಾಗಿ ವಿಂಗಡಿಸಿ ಪ್ರತಿಯೊಬ್ಬರೂ ಪ್ರತ್ಯೇಕ ಶವಸಂಸ್ಕಾರಗಳನ್ನು ನಡೆಸುತ್ತೇವೆ ಅಂತ ಕಿಶನ್ ಪಟ್ಟು ಹಿಡಿದಿದ್ದಾನೆ.
ಕೊನೆಗೆ ಗ್ರಾಮಸ್ಥರೆಲ್ಲ ಬಂದು, ಇಬ್ಬರನ್ನೂ ತಡೆದಿದ್ದಾರೆ. ಬಳಿಕ ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳದಿಂದ ಕಿಶನ್ ಸಿಂಗ್ ಹಾಗೂ ದೇಶರಾಜ್ ಸಿಂಗ್‌ಗೆ ಮನವರಿಕೆ ಮಾಡಿಕೊಡುವಲ್ಲಿ ಯಶಸ್ವಿಯಾದರು. ಅಂತಿಮವಾಗಿ ಕಿರಿಯ ಮಗ ಶವಸಂಸ್ಕಾರವನ್ನು ನಡೆಸಿದರು ಎಂದು ಅಧಿಕಾರಿ ಹೇಳಿದ್ದಾರೆ.
Leave a Comment