ನಟಿ ಶೋಭಿತಾ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ಲೆಟರ್ ಪತ್ತೆ; ಶಾಕಿಂಗ್ ಮಾಹಿತಿ ಕೊಟ್ಟ ಸಂಬಂಧಿ
ನ್ಯೂಸ್ ಆ್ಯರೋ: ಬ್ರಹ್ಮಗಂಟು ಸೀರಿಯಲ್ ನಟಿ ಶೋಭಿತಾ ಶಿವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಂಬಂಧಿ ವಿಜಯ್ ಎನ್ನುವರು ಮಾಹಿತಿ ನೀಡಿದ್ದಾರೆ. ಈ ಕುರಿತು ಮಾತನಾಡಿದ ವಿಜಯ್ ಅವರು, ಶೋಭಿತಾ ಶಿವಣ್ಣ ಹೇಗೆ ಕೊನೆಯುಸಿರೆಳೆದರು ಎನ್ನುವ ಕಾರಣ ಅವರ ಗಂಡ ಸುಧೀರ್ಗೂ ಗೊತ್ತಿಲ್ಲ. ಅವರೇ ಹೋಗಿ ಬಾಗಿಲು ಮುರಿದು ನೋಡಿ ಫುಲ್ ಶಾಕ್ ಆಗಿದ್ದರು ಎಂದು ಹೇಳಿದ್ದಾರೆ.
ನಟಿ ಶೋಭಿತಾ ಶಿವಣ್ಣ ಅವರು ರಾತ್ರಿ ತಮ್ಮ ಕುಟುಂಬದ ಜೊತೆ ಮಾತಾಡಿದ್ದರು. ರಾತ್ರಿ ಗಂಡ-ಹೆಂಡತಿ ಇಬ್ಬರು ಊಟ ಮಾಡಿದ್ದರು. ಸುಧೀರ್ ಹಾಗೂ ಶೋಭಿತಾ ಬೇರೆ ಬೇರೆ ರೂಮ್ನಲ್ಲಿದ್ದರು. ಆಫೀಸ್ ಕೆಲಸ ಮಾಡುತ್ತಲೇ ಸುಧೀರ್ ಹಾಗೆ ನಿದ್ದೆಗೆ ಜಾರಿದ್ದರು. ರಾತ್ರಿ ಶೋಭಿತಾ ತಮ್ಮ ಸಹೋದರಿ ಬಳಿ ಫೋನ್ನಲ್ಲಿ ಮಾತಾಡುತ್ತಿರುವುದನ್ನ ಸುಧೀರ್ ಕೇಳಿಸಿಕೊಂಡಿದ್ದನು ಎಂದು ಹೇಳಿದ್ದಾರೆ.
ಬೆಳಗ್ಗೆ 8 ಗಂಟೆಗೆ ಮನೆ ಕೆಲಸದಾಕೆ ಬಂದು ಶೋಭಿತಾ ಬಾಗಿಲು ತೆಗೆಯುತ್ತಿಲ್ಲ ಎಂದು ಸುಧೀರ್ ಬಳಿ ಹೇಳಿದ್ದಾಳೆ. ಸುಮಾರು ಅರ್ಧ ಗಂಟೆ ಶೋಭಿತಾ ರೂಮ್ ಬಾಗಿಲು ತೆಗೆಯಲು ಗಂಡ ಸುಧೀರ್ ಪ್ರಯತ್ನಿಸಿದ್ದಾರೆ. ಆದರೆ ಆಗಿಲ್ಲ. ಹೀಗಾಗಿಯೇ ಗಾಬರಿಗೊಂಡು ಅದೇ ಅಪಾರ್ಟ್ಮೆಂಟ್ನಲ್ಲಿದ್ದ ಸ್ನೇಹಿತರು ಹಾಗೂ ಸಂಬಂಧಿಕನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಆ ನಂತರ ರೂಮ್ ಬಾಗಿಲನ್ನು ಗಂಡ ಮುರಿದು ಹಾಕಿ ಒಳಗೆ ನೋಡಿ ಶಾಕ್ ಆಗಿದ್ದಾನೆ.
ರೂಮ್ ಒಳಗೆ ಶೋಭಿತಾ ಅವರು ಫ್ಯಾನಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಕ್ಷಣ ಅವರು ಪೊಲೀಸರಿಗೆ ಖುದ್ದು ಪತಿ ಸುಧೀರ್ ಅವರೇ ಮಾಹಿತಿ ನೀಡಿದ್ದಾರೆ. ಶೋಭಿತಾ ಸಾವಿನ ಬಗ್ಗೆ ಸುಧೀರ್ಗೂ ಕಾರಣವೇನು ಎಂಬುದು ಗೊತ್ತಿಲ್ಲ ಎಂದು ಅವರ ಸ್ನೇಹಿತ ಹಾಗೂ ಸಂಬಂಧಿ ವಿಜಯ್ ಅವರು ಹೇಳಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಹೈದರಾಬಾದ್ನ ಗಚ್ಚಿಬೌಲಿ ಪೊಲೀಸರು ತನಿಖೆ ನಡೆಸಿದ್ದಾರೆ. ಪೊಲೀಸರಿಗೆ ಆತ್ಮಹತ್ಯೆ ಪತ್ರ ಸಿಕ್ಕಿದೆ. ಇದರಲ್ಲಿ ಒಂದು ವಿಚಾರ ಹೈಲೈಟ್ ಆಗಿದೆ. ಪೊಲೀಸರಿಗೆ ಶೋಭಿತಾ ಸೂಸೈಡ್ ಲೇಟರ್ ಸಿಕ್ಕಿದೆ. ‘ನೀನು ಸಾಯಬಹುದು ಅಂದ್ರೆ ನೀನು ಸಾಯಬಹುದು’ ಎಂದು ಬರೆಯಲಾಗಿದೆ. ‘ಜೀವನದಲ್ಲಿ ಎಲ್ಲವೂ ಪೆರ್ಫೆಕ್ಟ್ ಆಗಿದೆ’ ಎಂದು ಬರೆಯಲಾಗಿದೆ. ಇದರ ಅರ್ಥಕ್ಕಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೆರೆ ಹೊರೆಯವರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ‘ಶೋಭಿತಾ ಸಾವಿಗೆ ಖಿನ್ನತೆ ಕಾರಣವೇ? ಪತಿಯೊಂದಿಗೆ ಭಿನ್ನಾಭಿಪ್ರಾಯ ಇತ್ತೇ’ ಎಂಬ ನಿಟ್ಟಿನಲ್ಲೂ ತನಿಖೆ ನಡೆಯುತ್ತಿದೆ.
ಶೋಭಿತಾ ಮದುವೆ ಬಳಿಕ ಧಾರಾವಾಹಿ ಹಾಗೂ ಸಿನಿಮಾಗಳಿಂದ ದೂರ ಉಳಿದಿದ್ದರು. ಈ ವಿಚಾರವಾಗಿ ಪೊಲೀಸರು ಪತಿ ಸುಧೀರ್ ರೆಡ್ಡಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಸುಧೀರ್ ರೆಡ್ಡಿ ಮೂರು ದಿನಗಳ ಹಿಂದೆ ಗೋವಾಕ್ಕೆ ತೆರಳಿದ್ದರು. ಆತ್ಮಹತ್ಯೆಗೂ ಮುನ್ನ ಶೋಭಿತಾ ತಮ್ಮ ಸಹೋದರಿಯೊಂದಿಗೆ ಮಾತುಕತೆ ಮಾಡಿದ್ದರು. ‘ನನಗೆ ತುಂಬಾ ಖುಷಿಯಾಗಿದೆ. 2 ವಾರದ ನಂತರ ಊರಿಗೆ ಬರುತ್ತೇನೆ’ ಎಂದು ಸಹೋದರಿ ಬಳಿ ಹೇಳಿಕೊಂಡಿದ್ದರು ಎಂದು ತಿಳಿದು ಬಂದಿದೆ.
Leave a Comment