ಶಿರಾಡಿ ಘಾಟ್ ಸಂಚಾರ ಬಂದ್, ಸಂಪಾಜೆ ಮಡಿಕೇರಿ ರಸ್ತೆ ಬಳಸಿ – ಬೆಂಗಳೂರು ಪ್ರಯಾಣಿಕರಿಗೆ ದ.ಕ. ಜಿಲ್ಲಾಧಿಕಾರಿ ಮುಗಿಲನ್ ಮನವಿ
ನ್ಯೂಸ್ ಆ್ಯರೋ : ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದೊಡ್ಡತಪ್ಪಲು ಪ್ರದೇಶದಲ್ಲಿ ಭೂ ಕುಸಿತ ಆಗಿರುವುದರಿಂದ ಮಂಗಳೂರಿನಿಂದ ಬೆಂಗಳೂರು ಹೋಗುವವರು ಸಂಪಾಜೆ, ಮಡಿಕೇರಿ ಮಾರ್ಗವಾಗಿ ತೆರಳಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ಸಮೀಪದ ದೊಡ್ಡತಪ್ಪಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಆಗಿದೆ. ಹೀಗಾಗಿ, ಶಿರಾಡಿ ಘಾಟ್ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಂಡಿದೆ. ಮುಂದಿನ ಸೂಚನೆಯವರೆಗೆ ಯಾರೂ ಶಿರಾಡಿ ಘಾಟ್ ರಸ್ತೆಯಲ್ಲಿ ಹೋಗಬಾರದು ಎಂದು ಅವರು ತಿಳಿಸಿದ್ದಾರೆ.
ಭಾರಿ ಮಳೆಯಿಂದಾಗಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಶಿರಾಡಿ ಘಾಟಿಯ ದೊಡ್ಡತಪ್ಪಲು ಬಳಿ ಇಂದು ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಮತ್ತೆ ಭಾರೀ ಭೂಕುಸಿತ ಸಂಭವಿಸಿದ್ದು, ಹಲವು ವಾಹನಗಳು ಮಣ್ಣಿನಡಿ ಸಿಲುಕಿವೆ. ಎರಡು ಕಾರು, ಒಂದು ಟ್ಯಾಂಕರ್ ಸೇರಿ ಆರು ವಾಹನಗಳು ಮಣ್ಣನಡಿ ಸಿಲುಕಿವೆ ಎನ್ನಲಾಗಿದೆ.
ಸದ್ಯ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ರಕ್ಷಣಾ ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವು ಮಾಡುತ್ತಿದ್ದಾರೆ. ಸ್ಥಳದಲ್ಲಿ ಆತಂಕ ಹೆಚ್ಚಾಗಿದೆ. ಮತ್ತಷ್ಟು ಮಣ್ಣು ಕುಸಿದರೆ ದೊಡ್ಡ ಅನಾಹುತವೇ ಸಂಭವಿಸುವ ಭೀತಿ ಎದುರಾಗಿದೆ. ಹಾಗಾಗಿ ಸಮರೋಪಾದಿಯಲ್ಲಿ ಮಣ್ಣು ತೆರವು ಮಾಡಲು ಪ್ರಯತ್ನಿಸಲಾಗುತ್ತಿದೆ.ಸದ್ಯ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಿಂದ ಬರುತ್ತಿರುವ ವಾಹನಗಳನ್ನು ಗುಂಡ್ಯದಲ್ಲೇ ಪೊಲೀಸರು ತಡೆಯುತ್ತಿದ್ದಾರೆ.
ಮಾಣಿಯಿಂದ ಪುತ್ತೂರು ಹೋಗುವಲ್ಲಿ ಕೂಡ ಸಣ್ಣ ಪ್ರಮಾಣದಲ್ಲಿ ಮಣ್ಣು ಕುಸಿತ ಆಗಿದ್ದು, ತೆರವು ಕಾರ್ಯ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
Leave a Comment