ಗೂಗಲ್ ನಿಂದ ಮಹಾ ಕುಂಭ ʼಮ್ಯಾಜಿಕ್ʼ ಉತ್ಸವ; ನಿಮ್ಮ ಫೋನ್‌ನಲ್ಲಿ ಒಮ್ಮೆ ಮಹಾಕುಂಭ ಎಂದು ಬರೆದು ನೋಡಿ

ನ್ಯೂಸ್ ಆ್ಯರೋ: ಜಗತ್ತಿನ ಅತಿ ದೊಡ್ಡ ಸರ್ಚ್ ಪ್ಲಾಟ್‌ಫಾರ್ಮ್ ಗೂಗಲ್ ಸದ್ಯ ಭಾರತದಲ್ಲಿ ನಡೆಯುತ್ತಿರುವ ಮಹಾ ಕುಂಭ ಉತ್ಸವದ ಭಕ್ತಿಯಲ್ಲಿ ಮುಳುಗಿ ಹೋಗಿದೆ. ಮಹಾಕುಂಭವನ್ನು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಆಯೋಜಿಸಲಾಗಿದೆ. ಇದರಲ್ಲಿ ಭಾರತ ಮತ್ತು ವಿದೇಶದಿಂದ ಅನೇಕ ಜನರು ಭಾಗವಹಿಸಲು ಬರುತ್ತಿದ್ದಾರೆ.
ಈ ಸಂದರ್ಭವನ್ನು ವಿಶೇಷವಾಗಿಸಲು, ಗೂಗಲ್ ಮ್ಯಾಜಿಕ್ ಟೂಲ್ ಅನ್ನು ಹೊರತಂದಿದೆ. ನೀವು ಗೂಗಲ್‌ನಲ್ಲಿ ಮಹಾಕುಂಭ ಎಂದು ಸರ್ಚ್ ಮಾಡಿದರೆ, ನಿಮ್ಮ ಡಿಸ್ಪ್ಲೇಯು ಗುಲಾಬಿ ದಳಗಳಿಂದ ತುಂಬಿ ಹೋಗುವಂತಹ ಮ್ಯಾಜಿಕ್ ಅನ್ನು ಗೂಗಲ್ ಮಾಡಿದೆ. ಅಲ್ಲದೆ ನೀವು ಈ ಫೋಟೋವನ್ನು ಯಾರೊಂದಿಗಾದರೂ ಹಂಚಿಕೊಳ್ಳಬಹುದು.
ಇದಕ್ಕಾಗಿ ನೀವು ನಿಮ್ಮ ಮೊಬೈಲ್ ಫೋನ್ ಅಥವಾ ಡೆಸ್ಕ್‌ಟಾಪ್‌ನಲ್ಲಿ ಗೂಗಲ್ ಅನ್ನು ತೆರೆಯಬೇಕಾಗುತ್ತದೆ. ಇದರ ನಂತರ, ಸರ್ಚ್ ಬಾರ್ನಲ್ಲಿ ಮಹಾಕುಂಭ ಎಂದು ಕನ್ನಡ, ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಬರೆಯಬೇಕು. ಇದನ್ನು ಬರೆದ ಕೆಲವೇ ನಿಮಿಷಗಳಲ್ಲಿ ನಿಮ್ ಡಿಸ್ಪ್ಲೇ ಮೇಲೆ ಗುಲಾಬಿ ದಳಗಳ ಮಳೆ ಸುರಿಯುತ್ತದೆ. ಅಲ್ಲದೆ, ಕೆಳಭಾಗದಲ್ಲಿ ನೀವು ಪರದೆಯ ಮೇಲೆ ಮೂರು ಆಯ್ಕೆಗಳನ್ನು ನೋಡುತ್ತೀರಿ.
ಮೊದಲ ಆಯ್ಕೆಯನ್ನು ಕ್ಲಿಕ್ ಮಾಡುವ ಮೂಲಕ, ಗುಲಾಬಿ ದಳಗಳ ಮಳೆಯನ್ನು ನಿಲ್ಲಿಸಬಹುದು. ಹಾಗೆಯೆ ಎರಡನೆಯ ಮಧ್ಯದ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ, ನೀವು ಇನ್ನೂ ಹೆಚ್ಚಿನ ಗುಲಾಬಿ ದಳಗಳನ್ನು ಬೀಳಿಸುವಂತೆ ಮಾಡಲು ಸಾಧ್ಯವಾಗುತ್ತದೆ. ಮೂರನೇ ಆಯ್ಕೆಯನ್ನು ಟ್ಯಾಪ್ ಮಾಡುವ ಮೂಲಕ, ಈ ಡಿಸ್ಪ್ಲೇಯನ್ನು ಯಾರೊಂದಿಗಾದರೂ ಹಂಚಿಕೊಳ್ಳಬಹುದು.
12 ವರ್ಷಗಳ ನಂತರ ಈ ಬಾರಿ ಮಹಾಕುಂಭವನ್ನು ಆಯೋಜಿಸಲಾಗುತ್ತಿದೆ. ಈ ಬಾರಿ ಮಹಾಕುಂಭಕ್ಕೆ 35 ಕೋಟಿ ಭಕ್ತರು ಬರುವ ನಿರೀಕ್ಷೆ ಇದೆ. ಮಹಾಕುಂಭ ಜನವರಿ 13 ರಿಂದ ಫೆಬ್ರವರಿ 26 ರವರೆಗೆ ನಡೆಯಲಿದೆ. ಸುಮಾರು 10,000 ಎಕರೆ ಪ್ರದೇಶದಲ್ಲಿ ಇದನ್ನು ಆಯೋಜಿಸಲಾಗುತ್ತಿದೆ. ಜನವರಿ 2024 ರಲ್ಲಿ ಅಯೋಧ್ಯೆಯಲ್ಲಿ ಭಗವಾನ್ ರಾಮ್ ಲಾಲಾ ಪವಿತ್ರೀಕರಣದ ನಂತರ ನಡೆಯುತ್ತಿರುವ ಮೊದಲ ಮಹಾಕುಂಭ ಇದಾಗಿದೆ. ಮೊದಲ ದಿನವಾದ ನಿನ್ನೆ (ಜ. 13) 1 ಕೋಟಿ ಭಕ್ತರು ತೀರ್ಥ ಸ್ನಾನ ಮಾಡಿದ್ದಾರೆ.
Leave a Comment