Mangalore : ಟಾರ್ಗೆಟ್ ಇಲ್ಯಾಸ್ ಕೊಲೆ ಆರೋಪಿ ಕಡಪ್ಪರ ಸಮೀರ್ ಕೊಲೆ ಪ್ರಕರಣ – ಸಮೀರ್ ಪತ್ನಿ ನೀಡಿದ ದೂರಲ್ಲೇನಿದೆ? ರೌಡಿ ಶೀಟರ್ ಕೊಲೆಗೆ ಸ್ಕೆಚ್ ಹಾಕಿದ್ದು ಯಾರು?
ನ್ಯೂಸ್ ಆ್ಯರೋ : ಟಾರ್ಗೆಟ್ ಇಲ್ಯಾಸ್ ಕೊಲೆ ಆರೋಪಿ, ಉಳ್ಳಾಲ ಪೋಲಿಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದ ಕಡಪ್ಪರ ಸಮೀರ್ ಕಳೆದ ಭಾನುವಾರ ರಾತ್ರಿ ತಾಯಿ, ಪತ್ನಿ ಹಾಗೂ ಮಕ್ಕಳ ಮುಂದೆಯೇ ಕೊಲೆಯಾಗಿದ್ದು, ಪತ್ನಿ ನೀಡಿದ ದೂರಿನಲ್ಲಿ ಘಟನೆಯ ಇಂಚಿಂಚು ಮಾಹಿತಿ ಹೊರಬಿದ್ದಿದೆ.
2018 ರಲ್ಲಿ ಟಾರ್ಗೆಟ್ ಇಲ್ಯಾಸ್ ಕೊಲೆಯ ಬಳಿಕ ಬಂಧನವಾಗಿದ್ದ ಸಮೀರ್ 2023ರಲ್ಲಿ ಆ ಪ್ರಕರಣದಲ್ಲಿ ಖುಲಾಸೆಯಾಗಿದ್ದ. ಬಳಿಕ ಕೆಲ ಸಮಯದ ಹಿಂದೆ ದರೋಡೆ ಪ್ರಕರಣದಲ್ಲಿ ಜೈಲು ಪಾಲಾಗಿದ್ದು, ಕೊಲೆಯಾಗುವ ಎರಡು ದಿನಗಳ ಹಿಂದಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.
ಸಮೀರ್ ಪತ್ನಿ ಸುಮಯ್ಯ ನೀಡಿದ ದೂರಿನಲ್ಲಿ ದಾಖಲಾದ ಅಂಶಗಳು ಏನೇನು?
ಭಾನುವಾರ ರಾತ್ರಿ 9:30ಕ್ಕೆ ನಾನು ಪತಿ ಸಮೀರ್, ಅತ್ತೆ ಜಮೀಲಾ ಮತ್ತು ಇತರ ಇಬ್ಬರು ಮಕ್ಕಳ ಜೊತೆ ಕಾರಿನಲ್ಲಿ ಮುಕ್ಕಚೇರಿಯ ಮನೆಯಿಂದ ಗೋರಿಗುಡ್ಡದಲ್ಲಿರುವ ಸಮೀರ್‌ನ ಸಹೋದರನ ಮನೆಗೆ ತೆರಳುತ್ತಿದ್ದಾಗ ತೊಕ್ಕೊಟ್ಟು ಜಂಕ್ಷನ್ ಬಳಿ ತಲುಪಿದೆವು.
ಅಷ್ಟರಲ್ಲಿ ಸಮೀರ್‌ಗೆ ಯಾರೋ ಒಬ್ಬರು ಫೋನ್ ಮಾಡಿ ಕಲ್ಲಾಪುವಿನ ರೆಸ್ಟೋರೆಂಟ್ ಬಳಿ ಬರುವಂತೆ ಹೇಳಿದ್ದಾರೆ. ಅದರಂತೆ ರಾತ್ರಿ 10ಕ್ಕೆ ರೆಸ್ಟೋರೆಂಟ್ ಬಳಿ ಕಾರನ್ನು ನಿಲ್ಲಿಸಿದ ಸಮೀರ್ ನಡೆದುಕೊಂಡು ಕಾರಿನ ಹಿಂದಕ್ಕೆ ಹೋಗುತ್ತಿದ್ದಾಗ ಇನ್ನೊಂದು ಕಾರಿನಲ್ಲಿದ್ದ 5 ಮಂದಿ ಇಳಿದು ಸಮೀರ್‌ಗೆ ಅವಾಚ್ಯ ಶಬ್ದದಿಂದ ಬೈದಿದ್ದಾರೆ.
ಈ ಪೈಕಿ ನೌಶಾದ್ ಮತ್ತಿತರ ನಾಲ್ಕು ಮಂದಿ ತಲವಾರುಗಳನ್ನು ಹಿಡಿದುಕೊಂಡು ಕಡಿಯಲು ಬಂದಾಗ ಸಮೀರ್ ತಪ್ಪಿಸಿದ್ದಾರೆ. ಆವಾಗ ಇನ್ನೊಬ್ಬ ಆರೋಪಿ ಅಡ್ಡಬಂದು ತಡೆದಿದ್ದು, ಅವನಿಂದಲೂ ತಪ್ಪಿಸಿಕೊಂಡು ಸಮೀರ್ ಓಡಿ ಪರಾರಿಯಾಗುವಾಗ ಆರೋಪಿಗಳು ಬೆನ್ನಟ್ಟಿಕೊಂಡು ತಲವಾರುಗಳಿಂದ ಕಡಿದು ಕೊಲೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸುಮಯ್ಯ ಅವರ ದೂರಿನ ಆಧಾರದಲ್ಲಿ ಉಳ್ಳಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 150/2024 u/s 189(2) ರಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದ್ದು, 191(2), 191(3), 352, 351(2), 126(2), 118(2), 103, 190 BNS, 2024 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಜೈಲಿನಲ್ಲೇ ಸಮೀರ್ ಕೊಲೆಗೆ ಸ್ಕೆಚ್ ಹಾಕಲಾಗಿತ್ತಾ?
ಇತ್ತೀಚೆಗೆ ನ್ಯಾಯಾಂಗ ಬಂಧನದಲ್ಲಿರುವಾಗ ಜುಲೈ 1ರಂದು ಮಂಗಳೂರು ಕೊಡಿಯಾಲ್ ಬೈಲ್ ನ ಕಾರಾಗೃಹದಲ್ಲಿ ಜೈಲಿನ ಆವರಣದಲ್ಲೇ ಸಮೀರ್ ಪ್ರತಿಸ್ಪರ್ಧಿ ಗ್ಯಾಂಗ್‌ನಿಂದ ಹಲ್ಲೆ ನಡೆಸಲಾಗಿತ್ತು ಜುಲೈ 1ರ ಸಂಜೆ 6:30 ರ ಸುಮಾರಿಗೆ ಸಮೀರ್ ಮೇಲೆ ಹಲ್ಲೆ ನಡೆಸಿದ ಪ್ರತಿಸ್ಪರ್ಧಿ ಗ್ಯಾಂಗ್ ಸದಸ್ಯರ ವಿರುದ್ಧ ಬರ್ಕೆ ಪೋಲಿಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 56/2024 ನಂತೆ u/s 115(2), 118(1), 109, 352, 189(1), 189(2), 189(4), 191(1), 191(2), 191(3), 190, 61(2) BNS, 2024 & 45 ಕರ್ನಾಟಕ ಜೈಲು ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಸುಳಿವು ಪತ್ತೆ..!
ಕೊಲೆಯಾದ ಸಮೀರ್ ನ ಮೃತದೇಹ ಪತ್ತೆಯಾದ ಬಳಿಕ ವೆನ್ಲಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಂತರ ಕುಟುಂಬ ಸದಸ್ಯರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೋಲಿಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಸಮೀರ್ ಗೆ ಕರೆ ಮಾಡಿ ಕಲ್ಲಾಪು ಜಂಕ್ಷನ್ ಗೆ ಕರೆದಾತ ಯಾರು? ಕೊಲೆ ಮಾಡಿದ ಬಳಿಕ ದುಷ್ಕರ್ಮಿಗಳು ಪರಾರಿಯಾಗಿದ್ದು ಹೇಗೆ ಎಂಬುದರ ಬಗ್ಗೆ ಪೋಲಿಸರು ಮಾಹಿತಿ ಕಲೆಹಾಕುತ್ತಿದ್ದಾರೆ.
Leave a Comment