
Astami Special : ಕರಾವಳಿಯಲ್ಲಿ ಫೇಮಸ್ ಈ ಕೊಟ್ಟೆ ಕಡುಬು – ಇದನ್ನು ಮಾಡೋದು ಹೇಗೆ ಗೊತ್ತಾ? ಇಲ್ಲಿದೆ ಮಾಡೋ ವಿಧಾನ..
- ನಳಪಾಕ
- September 5, 2023
- No Comment
- 46
ನ್ಯೂಸ್ ಆ್ಯರೋ : ಕರಾವಳಿ ವಿವಿಧ ಆಚರಣೆಗಳ ನೆಲೆವೀಡು. ಇಲ್ಲಿನ ಆಚಾರ-ವಿಚಾರ ವಿಭಿನ್ನ ಸಂಸ್ಕೃತಿ, ಆಹಾರದ ವೈಶಿಷ್ಟ್ಯ ಎಲ್ಲವೂ ವಿಶೇಷ.. ಅದರಲ್ಲೂ ಹಬ್ಬ ಹರಿದಿನಗಳು ಬಂತದ್ರೇ ಸಾಕು ಕರಾವಳಿಯ ಪ್ರತಿ ಮನೆ ಮನೆಯಲ್ಲೂ ಹಬ್ಬದ ಸಂಭ್ರಮ ಮೇಳೈಸುತ್ತದೆ. ಸಾಂಪ್ರದಾಯಿಕ ತಿಂಡಿ ತಿನಿಸುಗಳನ್ನು ಮಾಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಅದರಲ್ಲೂ ಶ್ರೀ ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿಯಲ್ಲಂತೂ ಪ್ರತಿ ಮನೆಯಲ್ಲೂ ಸಾಂಪ್ರದಾಯಿಕ ತಿನಿಸು ಆದ ಕೊಟ್ಟಿಗೆ (ಕಡುಬು) ಗೆ ವಿಶೇಷ ಮಾನ್ಯತೆ ಇರುತ್ತದೆ. ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಕ್ಷಣಗಣನೆ ಆರಂಭವಾಗಿದೆ. ಅಷ್ಟಮಿಗೆ ಏನೇ ಸ್ಪೆಷಲ್ ಇದ್ರೂ ಕೊಟ್ಟೆ ಕಡುಬುಗೆ ಮಾತ್ರ ವಿಶೇಷ ಮಾನ್ಯತೆ ನೀಡಲಾಗುತ್ತದೆ.
ಸಾಂಪ್ರದಾಯಿಕ ತಿಂಡಿಯಾದ ಕೊಟ್ಟೆ ಕಡುಬು ಅನ್ನು ಮಾಡಲು ಒಂದು ದಿನದ ತಯಾರಿ ಬೇಕು. ಈಗೆಲ್ಲಾ ಕೊಟ್ಟೆ ಕಡುಬು ಮಾಡಲು ಬೇಕಾದ ವಸ್ತುಗಳು ಮಾರುಕಟ್ಟೆಯಲ್ಲಿ ಲಭ್ಯವಾದರೂ, ಗ್ರಾಮೀಣ ಭಾಗದಲ್ಲಿ ಕೊಟ್ಟೆ ಕಡುಬಿಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಮನೆ ಮಂದಿಯೇ ತಯಾರಿಸುತ್ತಾರೆ. ಪ್ರಮುಖವಾಗಿ ಈ ಕೊಟ್ಟೆ ಕಡುಬು ಅನ್ನು ಹಲಸಿನ ಎಲೆ ಅಥವಾ ಬಾಳೆ ಎಲೆಯನ್ನು ಉಪಯೋಗಿಸಿ ಮಾಡಲಾಗುತ್ತದೆ..
ಕೊಟ್ಟೆ ಕಡುಬು ಮಾಡುವ ವಿಧಾನ:
ಈ ಕೊಟ್ಟೆ ಕಡುಬು ಮಾಡೋದು ಇಡ್ಲಿ ತಯಾರಿಸಿದ ವಿಧಾನದ ರೀತಿಯೇ ಆದರೂ ಕೊಂಚ ವಿಭಿನ್ನವಾಗಿರುತ್ತದೆ. ಕೊಟ್ಟೆ ಕಡುಬು ಮಾಡಲು ಶ್ರಮ ಜಾಸ್ತಿ. ಆದರೆ ರುಚಿಯೂ ಜಾಸ್ತಿಯಾಗಿರುತ್ತದೆ. ಕೊಟ್ಟೆ ಕಡುಬು ಅನ್ನು ಮಾಡಬೇಕಾದರೆ ಮೊದಲು ಉದ್ದು ಮತ್ತು ಬೆಳ್ತಿಗೆ ಅಕ್ಕಿಯನ್ನು ಆರರಿಂದ ಎಂಟು ಗಂಟೆಗಳ ಕಾಲ ನೆನೆಸಿಡಬೇಕಾಗುತ್ತದೆ.
ಆ ಬಳಿಕ ಮಿಕ್ಸಿಯ ಬದಲು ಗ್ರೈಂಡರ್ ಅಥವಾ ಅರೆಯುವ ಕಲ್ಲಿನಲ್ಲಿ ಹಿಟ್ಟನ್ನು ತಯಾರು ಮಾಡಬೇಕು. ಯಾಕೆಂದರೆ ಉದ್ದಿನ ಬೇಳೆಯ ಹಿಟ್ಟು ಸಾಫ್ಟ್ ಆಗಿ ಹತ್ತಿಯ ತರಹ ರುಬ್ಬಿದರೆ ಅಕ್ಕಿಯ ಹಿಟ್ಟು ತರಿತರಿಯಾಗಿರಬೇಕು. ಹೀಗಾಗಿ ಎರಡೂ ಹಿಟ್ಟನ್ನು ಕಡಿಮೆ ನೀರು ಹಾಕಿ ಬೇರೆ ಬೇರೆ ಮಾಡಿಯೇ ಅರೆಯಬೇಕಾಗುತ್ತದೆ. ಹೀಗೆ ಮಾಡಿದ ಹಿಟ್ಟನ್ನು ಮತ್ತೆ ಎಂಟು ಗಂಟೆಗಳ ಕಾಲ ಇಡಬೇಕು.
ಬಾಳೆ ಎಲೆಯಲ್ಲಿ ಕೊಟ್ಟೆ ಕಡುಬು ಮಾಡೋದಾದರೆ, ಬಾಳೆ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿಬೇಕು. ನಂತರ ವೃತ್ತಾಕಾರದಲ್ಲಿ ಎಲೆಯನ್ನು ಮಡಚಿ, ಹಿಟ್ಟನ್ನು ಹಾಕಿ,ಬೇಯಲು ಇಡಬೇಕಾಗುತ್ತದೆ.
ಇನ್ನು ಹಲಸಿನ ಎಲೆಯಲ್ಲಿ ಕೊಟ್ಟೆ ಕಡುಬು ಮಾಡೋದಾದರೆ, ನಾಲ್ಕು ಎಲೆಯನ್ನು ಕಡ್ಡಿಯಿಂದ ವೃತ್ತಾಕಾರವಾಗಿ ಮಡಚಿಬೇಕಾಗುತ್ತದೆ. ಎಲೆಯ ಮಧ್ಯಕ್ಕೆ ಹಿಟ್ಟನ್ನು ಹಾಕಿ ಬೇಯಲು ಇಡಬೇಕು. ಹೀಗೆ ಮಾಡಿದ ಕೊಟ್ಟೆ ಕಡುಬು ಅನ್ನು ಎರಡು ದಿನಗಳವರೆಗೆ ಇಡಬಹುದು. ಕೊಟ್ಟಿಗೆ ಹಾಳಾಗೋದಿಲ್ಲ ಅನ್ನೋದು ಕೊಟ್ಟಿಗೆ ತಯಾರಿಸುವವರ ಅಭಿಪ್ರಾಯ.