ʼನೀವಿಲ್ಲ ಎಂಬ ವಿಚಾರ ಸಹಿಸಿಕೊಳ್ಳುವುದು ತುಂಬಾ ಕಷ್ಟʼ; ರತನ್​ ಟಾಟಾ ನಿಧನಕ್ಕೆ ಕಂಬನಿ ಮಿಡಿದ ಮಾಜಿ ಪ್ರೇಯಸಿ

Ratan Tata's ex girlfriend
Spread the love

ನ್ಯೂಸ್ ಆ್ಯರೋ: ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಖ್ಯಾತ ಉದ್ಯಮಿ ರತನ್​ ಟಾಟಾ (86) ಅಕ್ಟೋಬರ್ 09ರಂದು ವಿಧಿವಶರಾಗಿದ್ದು, ತಮ್ಮ ಸ್ವಂತ ಪರಿಶ್ರಮದಿಂದಲೇ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತವನ್ನು ಟಾಟಾ ಹೆಸರಿನೊಂದಿಗೆ ಗುರುತಿಸುವಂತೆ ಮಾಡಿದ್ದರು.

ರತನ್​ ಅವರ ನಿಧನಕ್ಕೆ ವಿವಿಧ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದು, ಅವರ ಮಾಜಿ ಪ್ರೇಯಸಿ ಕೂಡ ಕಂಬನಿ ಮಿಡಿದಿದ್ದಾರೆ.ಕಳೆದ ಕೆಲ ದಿನಗಳಿಂದ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ರತನ್​ ಟಾಟಾ ಸೋಮವಾರ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆ ಸೇರಿದ್ದರು. ಈ ವೇಳೆ ಅವರ ದೈಹಿಕ ಪರಿಸ್ಥಿತಿ ಹದಗೆಟ್ಟಿರುವುದಾಗಿ ಸುದ್ದಿ ಹರಿದಾಡಿತ್ತು. ಈ ಸಂಬಂಧ ರತನ್​ ಟಾಟಾ ಅವರ ಅಧಿಕೃತ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಲಾಗಿತ್ತು.

ವಯೋಸಹಜ ಕಾರಣಗಳಿಗಾಗಿ ತಪಾಸಣೆಗೊಳಪಟ್ಟಿದ್ದಾರೆ. ಆತಂಕಗೊಳ್ಳುವಂಥದ್ದೇನು ಇಲ್ಲ ಎಂದು ಹೇಳಲಾಗಿತ್ತು. ಆದರೆ ಬುಧವಾರ ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಅವರ ಸಾವು ಇಡೀ ದೇಶಕ್ಕೆ ಆಘಾತವನ್ನುಂಟು ಮಾಡಿದ್ದು, ರತನ್​ ನಿಧನದ ಕುರಿತಾಗಿ ಮಾಜಿ ಪ್ರೇಯಸಿ ಸಿಮಿ ಗರೆವಾಲ್ ಭಾವನಾತ್ಮಕ ಪೋಸ್ಟ್​ ಒಂದನ್ನು ಬರೆದಿದ್ದಾರೆ.

“ನೀವು ಇನ್ನಿಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ನೀವಿಲ್ಲ ಎಂಬ ವಿಚಾರವನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟ..ತುಂಬಾ ಕಷ್ಟ.. ವಿದಾಯ ನನ್ನ ಗೆಳೆಯ” ಎಂದು ಭಾವನಾತ್ಮಕ ಪೋಸ್ಟ್​ ಮಾಡಿದ್ದಾರೆ. ಈ ಪೋಸ್ಟ್​ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಅನೇಕರು ಕಂಬನಿ ಮಿಡಿದಿದ್ದಾರೆ.

2011ರ ಸಂದರ್ಶನವೊಂದರಲ್ಲಿ ಸಿಮಿ ಗರೆವಾಲ್ ರತನ್ ಟಾಟಾ ಅವರೊಂದಿಗಿನ ಸಂಬಂಧದ ಬಗ್ಗೆ ಮಾತನಾಡಿದ್ದರು. ಅವರು ತಮ್ಮ ಬಾಂಧವ್ಯವನ್ನು ವಿವರಿಸುತ್ತಾ, ‘ರತನ್ ಮತ್ತು ನನ್ನದು ಬಹಳ ಹಿಂದಿನ ಸಂಬಂಧ. ಅವರು ಪರಿಪೂರ್ಣತೆ, ಹಾಸ್ಯ ಪ್ರಜ್ಞೆಯನ್ನು ಹೊಂದಿದ್ದಾರೆ. ಅಸಾಧಾರಣ ಮತ್ತು ಪರಿಪೂರ್ಣ ಸಂಭಾವಿತ ವ್ಯಕ್ತಿ. ಹಣ ಅವರಿಗೆ ಎಲ್ಲವೂ ಆಗಿರಲಿಲ್ಲ. ಅವರು ವಿದೇಶದಲ್ಲಿರುವಷ್ಟು ನಿರಾಳರಾಗಿ ಭಾರತದಲ್ಲಿ ಇರಲಿಲ್ಲ’ ಎಂದು ಹೇಳಿಕೊಂಡಿದ್ದರು.

ಟಾಟಾ ಅವರ ಜೊತೆ ಡೇಟಿಂಗ್​ನಲ್ಲಿ ಇದ್ದರೂ, ಈ ಪ್ರೀತಿ ಮದುವೆಯ ಹಂತಕ್ಕೆ ಹೋಗಲಿಲ್ಲ. ಹೀಗಾಗಿ ಸಿಮಿ ನಂತರ ಬೇರೊಬ್ಬರನ್ನು ಮದುವೆಯಾದರು. ಆದಾಗ್ಯೂ, ಅವರು ತುಂಬಾ ವರ್ಷಗಳ ಕಾಲ ನಿಕಟ ಸ್ನೇಹಿತರಾಗಿದ್ದರು.

ರತನ್ ಟಾಟಾ ಅವರ ಕಾರ್ಯ ನೀತಿ, ನಮ್ರತೆ ಮತ್ತು ಔದಾರ್ಯಕ್ಕಾಗಿ ವ್ಯಾಪಕವಾಗಿ ಮೆಚ್ಚುಗೆ ಪಡೆದಿದ್ದಾರೆ. ಹಲವಾರು ಬಾರಿ ಪ್ರೀತಿಸಿದ್ದರೂ ಮದುವೆಯಾಗಲಿಲ್ಲ. ಅವರು ಈ ಹಿಂದೆ ಸಂದರ್ಶನವೊಂದರಲ್ಲಿ, ನಾಲ್ಕು ಸಂದರ್ಭಗಳಲ್ಲಿ ಪ್ರೀತಿಸುತ್ತಿದ್ದೆ ಆದರೆ ವಿವಿಧ ಕಾರಣಗಳಿಂದ ಮದುವೆ ಆಗಲು ಸಾಧ್ಯವಾಗಲಿಲ್ಲ ಎಂದು ಬಹಿರಂಗಪಡಿಸಿದ್ದರು.

Leave a Comment

Leave a Reply

Your email address will not be published. Required fields are marked *

error: Content is protected !!