ಪುತ್ತೂರು : ಮುಸ್ಲಿಂ ವಿದ್ಯಾರ್ಥಿನಿಗೆ ಹಿಂದೂ ವಿದ್ಯಾರ್ಥಿಯಿಂದ ಬ್ಲೇಡ್ ಇರಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ – ಸಂತ್ರಸ್ತೆಯ ಹೇಳಿಕೆಗೂ ಸಿಸಿ ಕ್ಯಾಮೆರಾ ದೃಶ್ಯಕ್ಕೂ ಸಾಮ್ಯತೆ ಇದೆಯಾ? ಪೋಲಿಸರೇ ಇಕ್ಕಟ್ಟಿಗೆ ಸಿಲುಕಿದ್ಯಾಕೆ?
ನ್ಯೂಸ್ ಆ್ಯರೋ : ಪುತ್ತೂರಿನ ಕೊಂಬೆಟ್ಟು ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಮುಸ್ಲಿಂ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ಕಲಾ ವಿಭಾಗದ ಹಿಂದೂ ವಿದ್ಯಾರ್ಥಿ ಲವ್ ಪ್ರಪೋಸ್ ನಿರಾಕರಿಸಿದ್ದಕ್ಕೆ ಬ್ಲೇಡ್ ನಿಂದ ಇರಿದು ಗಾಯಗೊಳಿಸಿದ್ದ ಎಂಬ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ವಿದ್ಯಾರ್ಥಿನಿ ಹೇಳಿಕೆ ಕಟ್ಟುಕತೆಯಾ ಎಂಬ ಬಗ್ಗೆ ಅನುಮಾನ ಮೂಡಿದೆ.
ನಿನ್ನೆ ಇಡೀ ದಿನ ಪುತ್ತೂರು ನಗರ ಠಾಣೆ ಮತ್ತು ಸರ್ಕಾರಿ ಆಸ್ಪತ್ರೆಯ ಪರಿಸರ ಬಿಗುವಿನಿಂದ ಕೂಡಿದ್ದು, ಕೋಮು ಸೂಕ್ಷ್ಮ ಪ್ರದೇಶವಾದ ಕಾರಣ ಈ ಪ್ರಕರಣವನ್ನು ಪೋಲಿಸರು ಗಂಭೀರವಾಗಿ ತೆಗೆದುಕೊಂಡಿದ್ದರು. ಗಾಯಗೊಂಡ ವಿದ್ಯಾರ್ಥಿನಿ ಆಸ್ಪತ್ರೆಗೆ ದಾಖಲಾಗಿದ್ದರೆ, ಆರೋಪಿ ವಿದ್ಯಾರ್ಥಿಯನ್ನು ಪೋಲಿಸರು ಠಾಣೆಗೆ ಕರೆತಂದು ಕೂರಿಸಿದ್ದರು. ಆದರೆ ಇಡೀ ಪ್ರಕರಣದ ಸತ್ಯಾಸತ್ಯತೆ ಬಗ್ಗೆ ನಾವು ನಿನ್ನೆಯೇ ನಮ್ಮ ವರದಿಯಲ್ಲಿ ಸರಳವಾಗಿ ವಿವರಿಸಿದ್ದು, ಕ್ಷುಲ್ಲಕ ವಿಚಾರಕ್ಕೆ ಇಬ್ಬರ ನಡುವೆ ನಡೆದ ಜಗಳಕ್ಕೆ ಪ್ರೀತಿಯ ಬಣ್ಣ ಹಚ್ಚಿದ್ಲಾ ವಿದ್ಯಾರ್ಥಿನಿ ಎಂದು ವರದಿ ಮಾಡಿದ್ದೆವು. ಇದೀಗ ನಮ್ಮ ಅನುಮಾನ ನಿಜವಾಗುವ ನಿರೀಕ್ಷೆ ಹೆಚ್ಚಾಗಿದೆ.
ವಿದ್ಯಾರ್ಥಿನಿಯ ಹೇಳಿಕೆ ಏನು?
ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿ ನೀಡಿದ ಹೇಳಿಕೆಯಂತೆ “ಕಾಲೇಜಿಗೆ ಬರುವಾಗ ನಾನು ಯಾವಾಗಲೂ ಬೊಳುವಾರು ಮಾರ್ಗವಾಗಿ ಬರುವುದು. ಆದರೆ ಇವತ್ತು ಪುಸ್ತಕ ತೆಗೆದುಕೊಳ್ಳುವ ನಿಟ್ಟಿನಲ್ಲಿ ಬೆಳಗ್ಗೆ 8.45ರ ಸುಮಾರಿಗೆ ಮುಖ್ಯ ರಸ್ತೆಯಾಗಿ ಶ್ರೀಧರ್ ಭಟ್ ಅಂಗಡಿಗೆ ಬಂದಾಗ ಅದು ಬಂದ್ ಆಗಿತ್ತು. ಹೀಗಾಗಿ ನಾನು ವಾಪಸ್ಸು ಆಂಚೆ ಕಚೇರಿಯ ಮಾರ್ಗವಾಗಿ ಕಾಲೇಜಿನತ್ತ ತೆರಳಿದೆ. ಈ ವೇಳೆ ನನ್ನನ್ನು ಇನ್ನೊಂದು ತರಗತಿಯ ವಿದ್ಯಾರ್ಥಿ ಫಾಲೋ ಮಾಡಿಕೊಂಡು ಬಂದಿದ್ದ. ಮೊದಲಿಗೆ ನನಗೆ ಗೊತ್ತಾಗಲಿಲ್ಲ. ಅವನ ಜೊತೆ ಇನ್ನೂ ಕೆಲವರು ಇದ್ದರು. ಇದರಿಂದ ನನಗೆ ಭಯವಾಯಿತು.
ನಂತರ ಉಳಿದವರು ಹೋದ ನಂತರ ಎದುರು ಬಂದ ಅವನು ನನ್ನ ಹತ್ತಿರ ಬಂದು ನೀನು ಇನ್ನೊಂದು ವಿದ್ಯಾರ್ಥಿನಿಯ ಫ್ರೆಂಡಾ ಎಂದು ಕೇಳಿದ. ನಾನು ಹೌದು ಅಂತ ಹೇಳಿದೆ. ಅದಕ್ಕೆ ಅವನು ಅವಳನ್ನು ನಾನು ಪ್ರೀತಿಸುವುದಿಲ್ಲ. ನಿನ್ನನ್ನು ಪ್ರೀತಿಸುತ್ತೇನೆ ಎಂದಾಗ ನಾನು ಜಾತಿ ವಿಚಾರಕ್ಕೆ ಗಲಾಟೆ ಮಾಡುವ ಕಾರಣಕ್ಕೆ ಹೀಗೆ ಮಾಡುವುದಾಗಿರಬಹುದು ಎಂದು ಅನಿಸಿದ ಕಾರಣ ನಾನು ಅವನಿಗೆ ಸರಿಯಾಗಿ ಬೈದೆ.
ಆವಾಗ ಇಲ್ಲ ನಾನು ನಿನ್ನನ್ನೇ ಲವ್ ಮಾಡೋದು ಎಂದು ಅಡ್ಡ ಕೈ ಇಟ್ಟ, ನಾನು ಅವನ ಕೈಯನ್ನು ಕುಟ್ಟಿದಾಗ
ಅದಕ್ಕೆ ಅವನು ನನ್ನ ಕೈಗೆ ಯಾವುದರಿಂದಲೋ ಗಾಯಗೊಳಿಸಿದ. ಬ್ಲೇಡ್ ಇರಬಹುದು ಎಂದು ನನ್ನ ಅನಿಸಿಕೆ ಎಂದು ವಿದ್ಯಾರ್ಥಿನಿ ಹೇಳಿಕೊಂಡಿದ್ದಳು.
ವಿದ್ಯಾರ್ಥಿನಿ ನೀಡಿದ್ದ ಹೇಳಿಕೆಯಾಧರಿಸಿ ತನಿಖೆ ಆರಂಭಿಸಿದ ಪೊಲೀಸರು, ಶ್ರೀಧರ್ ಭಟ್ ಅಂಗಡಿಯ ಸಿಸಿ ಕ್ಯಾಮರಾ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿದರು. ಆದರೆ ವಿದ್ಯಾರ್ಥಿನಿ ಈ ರಸ್ತೆಯಲ್ಲಿ ಹೋಗಿರುವುದು ಕ್ಯಾಮೆರಾಗಳಲ್ಲಿ ಕಂಡು ಬರಲಿಲ್ಲ. ಬಳಿಕ ಬೊಳುವಾರು ಸ್ನೇಹ ಟೆಕ್ಸ್ ಟೈಲ್ಸ್ ಕೊಂಬೆಟ್ಟು, ಶಾಲಾ ಪರಿಸರದ ಸಿಸಿ ಕ್ಯಾಮರ ಪರಿಶೀಲನೆ ಮಾಡಿದ್ದು, ಈ ವೇಳೆ, ಬೊಳುವಾರಿನಲ್ಲಿ ಆಕೆ ರಿಕ್ಷಾದಿಂದ ಇಳಿದು ಕಾಲೇಜಿಗೆ ಹೋಗುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ವಿದ್ಯಾರ್ಥಿನಿ ಆರೋಪ ಹೊರಿಸಿದ್ದ ವಿದ್ಯಾರ್ಥಿ ತನ್ನ ಸ್ನೇಹಿತನೊಂದಿಗೆ ನೆಲ್ಲಿಕಟ್ಟೆ ರಸ್ತೆಯಿಂದ ಬರುತ್ತಿದ್ದುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಪೋಲಿಸರಿಗೆ ಮತ್ತಷ್ಟು ಪೀಕಲಾಟಕ್ಕೆ ಈಡು ಮಾಡಿತ್ತು.
ಕಾಲೇಜಿಗೆ ಹೋಗುವಾಗ ಗಾಯ ಇರಲಿಲ್ವಾ?
ವಿದ್ಯಾರ್ಥಿನಿ ಕಾಲೇಜಿಗೆ ಹೋಗುವ ತನಕ ಆಕೆಯ ಕೈಗೆ ಗಾಯವಾಗಿರಲಿಲ್ಲ ಎಂದು ಕೆಲ ವಿದ್ಯಾರ್ಥಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೇ ಬೊಳುವಾರಿನಿಂದ ಸಂತ್ರಸ್ತೆ ಎನ್ನಲಾದ ವಿದ್ಯಾರ್ಥಿನಿ ಜೊತೆ ಆಕೆಯದೇ ಸಮುದಾಯದ ಮೂವರು ವಿದ್ಯಾರ್ಥಿನಿಯರು ಕೊಡ ಕಾಲೇಜಿಗೆ ನಡೆದುಕೊಂಡು ಹೋಗಿದ್ದರು. ಅವರು ಕೂಡ ಈ ರೀತಿಯ ಯಾವುದೇ ಘಟನೆ ನಡೆದಿರುವುದನ್ನು ನಿರಾಕರಿಸಿದ್ದರು. ಆದರೆ ವಿದ್ಯಾರ್ಥಿನಿ ಮತ್ತು ಆರೋಪ ಹೊತ್ತ ವಿದ್ಯಾರ್ಥಿ ಎಲ್ಲೂ ಜೊತೆಯಾಗಿ ಬರುತ್ತಿದ್ದ ದೃಶ್ಯ ಯಾವುದೇ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿಲ್ಲ ಅನ್ನೋದು ಚರ್ಚಿತ ಅಂಶ.
ಅಲ್ಲದೇ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೇಳೆ ವಿದ್ಯಾರ್ಥಿನಿ ಕಾಲೇಜಿನ ಶಿಕ್ಷಕಿಯೊಬ್ಬರು ತನ್ನ ಹೆಸರು ಬದಲಿಸುವಂತೆ ಮತ್ತು ಗಾಜು ತಾಗಿ ಗಾಯವಾಗಿದೆ ಎಂದು ಸುಳ್ಳು ಹೇಳಲು ಪ್ರಚೋದಿಸಿದ್ದಾರೆ ಎಂದು ಆರೋಪಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸಿಸಿ ಕ್ಯಾಮೆರಾ ದೃಶ್ಯಗಳೇ ಎಡಿಟ್ ಅಂದಳಾ ವಿದ್ಯಾರ್ಥಿನಿ?
ಸಿಸಿ ಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಗಳು ಮತ್ತು ಕಾಲೇಜಿಗೆ ಹೋಗುವ ತನಕ ಆಕೆಯ ಕೈಗೆ ಯಾವುದೇ ಗಾಯವಾಗದಿದ್ದ ಕುರಿತು ವಿದ್ಯಾರ್ಥಿಗಳು ನೀಡಿದ್ದ ಹೇಳಿಕೆ ಕುರಿತು ಪೊಲೀಸರು ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿದ್ಯಾರ್ಥಿನಿಗೆ ತಿಳಿಸಿದಾಗ ಆಕೆ ಅದನ್ನು ಒಪ್ಪದೇ ನಿರಾಕರಿಸಿದ್ದಾಳೆ ಎನ್ನಲಾಗಿದೆ. ಬಳಿಕ ಸಿಸಿಟಿವಿ ದೃಶ್ಯಗಳ ವಿಡಿಯೋ ದಾಖಲೆ ತೋರಿಸಿದಾಗ, ಇದು ಎಡಿಟ್ ಮಾಡಿದ ವಿಡಿಯೋ ಎಂದು ಪೊಲೀಸರಿಗೆ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಪ್ರಕರಣ ದಾಖಲಿಸುವ ಅನಿವಾರ್ಯತೆಗೆ ಸಿಲುಕಿದ ಪೋಲಿಸರು..!!
ಪೊಲೀಸ್ ಇಲಾಖೆ ವಿದ್ಯಾರ್ಥಿನಿಯ ದೂರಿನ ಮೇರೆಗೆ ಆರೋಪಿತ ವಿದ್ಯಾರ್ಥಿ ವಿರುದ್ಧ ದ.ಕ ಮಹಿಳಾ ಪೋಲಿಸ್ ಠಾಣೆಯಲ್ಲಿ ಅ.ಕ್ರ.42/2024 ರಂತೆ ಕಲಂ 78,126(2),118(1), 238 BNS 2023 ಮತ್ತು ಕಲಂ 12 ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದೆ.
ಆರೋಪಿತ ವಿದ್ಯಾರ್ಥಿಯ ಮೇಲೆ ಕ್ರಮ ಹೇಗೆ?
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೋಲಿಸರಿಗೆ ವಿದ್ಯಾರ್ಥಿನಿಯ ದೂರಿನಂತೆ ಆರೋಪಿತ ವಿದ್ಯಾರ್ಥಿ ವಿರುದ್ಧ ಯಾವುದೇ ಸ್ಪಷ್ಟ ಸಾಕ್ಷ್ಯ ಸಿಗದ ಕಾರಣ ಆತನ ಭವಿಷ್ಯದ ದೃಷ್ಟಿಯಿಂದ ಠಾಣೆಯಿಂದ ವಾಪಾಸ್ ಮನೆಗೆ ಕಳುಹಿಸಲಾಗಿದೆ. ಆದರೆ ದೂರು ನೀಡಿರುವ ವಿದ್ಯಾರ್ಥಿನಿಯ ದೂರಿಗೆ ಕಾರಣ ಏನಿರಬಹುದು? ಆಕೆ ನಿಜವಾಗಿಯೂ ಸಂತ್ರಸ್ತೆಯಾ? ಪೋಲಿಸರೇ ಉತ್ತರಿಸಬೇಕಿದೆ. ಇಬ್ಬರೂ ಅಪ್ರಾಪ್ತರಾದ ಕಾರಣ ಇಬ್ಬರಿಗೂ ನ್ಯಾಯ ಒದಗಿಸಬೇಕಾದ ಅನಿವಾರ್ಯತೆ ಪೋಲಿಸರಿಗಿದ್ದು, ಜಿಲ್ಲೆಯ ಹೊಸ ವರಿಷ್ಠಾಧಿಕಾರಿ ಯತೀಶ್ ಅವರಿಗೆ ಇದು ನಿಜವಾಗಿಯೂ ಸವಾಲಾಗಿ ಪರಿಣಮಿಸಿದೆ. ಸದ್ಯ ಅತ್ತ ಹಾವೂ ಸಾಯಬಾರದು ಇತ್ತ ಕೋಲೂ ಮುರಿಯಬಾರದು ಎಂಬ ಸಂದಿಗ್ಧತೆಗೆ ಸಿಲುಕಿರುವ ಪೋಲಿಸ್ ಇಲಾಖೆಯ ಮುಂದಿನ ನಡೆ ಕುತೂಹಲ ಮೂಡಿಸಿದೆ.
Leave a Comment