MUDA Scam : ಮಹತ್ವದ ದಾಖಲೆಯ ಮೇಲೆ ವೈಟ್ನರ್ ಹಾಕಿ ಸಾಕ್ಷ್ಯ ನಾಶ – ದಾಖಲೆ ತಿರುಚಿದ ಆರೋಪ : ‘ಸಿದ್ದುಗೆ ಗುದ್ದು’ ನೀಡಿದ ಬಿಜೆಪಿ
ನ್ಯೂಸ್ ಆ್ಯರೋ : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಿಲುಕಿದ್ದು ಅದರಿಂದಲೇ ಅವರ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದರ ಬೆನ್ನಲ್ಲೇ ಮುಡಾ ವಾಪಸ್ ಪಡೆದ ನಿವೇಶನಕ್ಕೆ ಬದಲಾಗಿ ವಿಜಯನಗರದಲ್ಲಿ ಸೈಟ್ ಕೊಡಿ ಎಂದು ಸಿಎಂ ಪತ್ನಿಯೇ ಪತ್ರ ಬರೆದಿದ್ದರು ಎನ್ನಲಾಗಿತ್ತು. ಆದರೆ ಇದೀಗ ಈ ದಾಖಲೆಗಳನ್ನೇ ತಿರುಚಿರುವ ಆರೋಪ ಕೇಳಿ ಬಂದಿದೆ.
ಈ ಬಗ್ಗೆ ರಾಜ್ಯ ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ “ಕಪ್ಪು ಚುಕ್ಕೆ ಮೇಲೆ ವೈಟ್ನರ್” ಹಾಕಿ ಸಾಕ್ಷ್ಯ ನಾಶ! ಭ್ರಷ್ಟಾತಿ ಭ್ರಷ್ಟ ಸಿದ್ದರಾಮಯ್ಯನವರ ಮುಡಾ ಹಗರಣದ ಒಂದೊಂದೇ ದಾಖಲೆಗಳು ದಿನಕ್ಕೊಂದರಂತೆ ಬಯಲಾಗುತ್ತಲೇ ಇವೆ. ಇದರ ನಡುವೆ ಬಿಡುಗಡೆ ಆಗುತ್ತಿರುವ ದಾಖಲೆಗಳನ್ನು ಕುತಂತ್ರದ ಮೂಲಕ ಮುಚ್ಚಿ ಹಾಕಲಾಗುತ್ತಿದೆ ಎಂದು ಕಿಡಿಕಾರಿದೆ.
ಸಿದ್ದರಾಮಯ್ಯನವರ ಪತ್ನಿ ಶ್ರೀಮತಿ ಪಾರ್ವತಿ ಅವರು ವಿಜಯನಗರದಲ್ಲೇ ಸೈಟು ಕೊಡಿ ಎಂದು ಪತ್ರ ಬರೆದಿದ್ದು ಬೆಳಕಿಗೆ ಬಂದಿದೆ. ಆದರೆ, ಸಿದ್ದರಾಮಯ್ಯ ಅವರು ಹಾಕಿದ ಭ್ರಷ್ಟಾಚಾರದ ಗಂಜಿಗೆ ಮುಡಾ ಅಧಿಕಾರಿಗಳು ಸಿಎಂ ಪತ್ನಿ ಬರೆದ ಪತ್ರದಲ್ಲಿನ ಸಾಲುಗಳಿಗೆ ವೈಟ್ನರ್ ಹಾಕಿ ಹಗರಣ ಮುಚ್ಚಿ ಹಾಕಲು ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಆರೋಪಿಸಿದೆ.
ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ವಾಮಮಾರ್ಗ ಹಿಡಿದಿರುವ ಸಿದ್ದರಾಮಯ್ಯನವರು ಕೊತ್ವಾಲ್ ಶಿಷ್ಯಂದಿರನ್ನು ರಾಜ್ಯದ ತುಂಬಾ ಬಿಟ್ಟು ದೊಂಬಿ ಎಬ್ಬಿಸುತ್ತಿದ್ದಾರೆ. ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕೂಡಲೇ ರಾಜೀನಾಮೆ ನೀಡಬೇಕು. ಹಾಗಾದರೆ ಮಾತ್ರ ಭ್ರಷ್ಟಾಚಾರ ಹೊರ ಬರಲು ಸಾಧ್ಯ. ಇಲ್ಲದೆ ಹೋದರೆ ತಮಗೆ ತಾವೇ ಕ್ಲೀನ್ ಚಿಟ್ ಕೊಟ್ಟುಕೊಂಡು ಜಗತ್ತಿನ ಮುಂದೆ ನಾನು ಸತ್ಯಹರಿಶ್ಚಂದ್ರನ ತುಂಡು ಎಂದು ಲಜ್ಜೆಬಿಟ್ಟು ಬಿಂಬಿಸಿಕೊಂಡರೂ ಅಚ್ಚರಿ ಇಲ್ಲ ಎಂದು ಬಿಜೆಪಿ ಕಟುವಾಗಿ ಟೀಕಿಸಿದೆ.
Leave a Comment