ವಯನಾಡು ಲೋಕಸಭಾ ಉಪ ಚುನಾವಣೆ; ನಾಮಪತ್ರ ಸಲ್ಲಿಸಿದ ಪ್ರಿಯಾಂಕಾ ಗಾಂಧಿ
ನ್ಯೂಸ್ ಆ್ಯರೋ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬುಧವಾರ ವಯನಾಡು ಲೋಕಸಭಾ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಜಿಲ್ಲಾಧಿಕಾರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ನಾಮಪತ್ರ ಸಲ್ಲಿಸಿದರು. ಈ ಮೂಲಕ ಚೊಚ್ಚಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಧುಮುಕಿದರು.
ಇದಕ್ಕೂ ಮುನ್ನಾ ಲೋಕಸಭೆ ವಿಪಕ್ಷ ನಾಯಕ ಹಾಗೂ ಸಹೋದರ ರಾಹುಲ್ ಗಾಂಧಿ ಅವರೊಂದಿಗೆ ಕಲ್ಬೆಟ್ಟಾದ ಹೊಸ ಬಸ್ ನಿಲ್ದಾಣದಿಂದ ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಯುಡಿಎಫ್ ನಾಯಕರು, ಕಾರ್ಯಕರ್ತರು ಸೇರಿದಂತೆ ಅಸಂಖ್ಯಾತ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಹಾಗೂ ಪಕ್ಷದ ಹಿರಿಯ ನಾಯಕರು ರೋಡ್ ಶೋನಲ್ಲಿ ಪಾಲ್ಗೊಂಡರು.
ರೋಡ್ ಶೋ ಗಾಗಿ ಕಾಯುತ್ತಿದ್ದ ಯುಡಿಎಫ್ ಕಾರ್ಯಕರ್ತರು, ಬೆಂಬಲಿಗರು ಮತ್ತು ಅಪಾರ ಜನಸ್ತೋಮ ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಅವರ ಭಾವಚಿತ್ರಗಳು, ಪಕ್ಷದ ಬಣ್ಣಗಳ ಬಲೂನ್‌ಗಳು ಮತ್ತು ಡ್ರಮ್ ಬಾರಿಸುವ ಫಲಕ ಹಿಡಿದು ಅವರನ್ನು ಸ್ವಾಗತಿಸಿದರು. ಕಾಂಗ್ರೆಸ್ ಮಿತ್ರ ಪಕ್ಷವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಪಕ್ಷದ ಬಣ್ಣಗಳ ಬಲೂನ್‌ಗಳು ರೋಡ್ ಶೋನಲ್ಲಿ ಕಂಡುಬಂದಿತು.
ನವೆಂಬರ್ 13 ರಂದು ವಯನಾಡಿನಲ್ಲಿ ಉಪಚುನಾವಣೆ ನಡೆಯಲಿದೆ. ಲೋಕಸಭೆ ಚುನಾವಣೆಯಲ್ಲಿ ವಯನಾಡ್ ಮತ್ತು ರಾಯ್ ಬರೇಲಿ ಕ್ಷೇತ್ರಗಳಿಂದ ಗೆಲುವು ಸಾಧಿಸಿದ ರಾಹುಲ್ ಗಾಂಧಿ ಕೇರಳದ ಲೋಕಸಭೆ ಸ್ಥಾನವನ್ನು ತೆರವು ಮಾಡಲು ನಿರ್ಧರಿಸಿದ ನಂತರ ಉಪಚುನಾವಣೆ ಅನಿವಾರ್ಯವಾಗಿದೆ. ಎಲ್‌ಡಿಎಫ್‌ನ ಸತ್ಯನ್ ಮೊಕೇರಿ ಮತ್ತು ಬಿಜೆಪಿಯ ನವ್ಯಾ ಹರಿದಾಸ್ ವಿರುದ್ಧ ಪ್ರಿಯಾಂಕಾ ಸ್ಪರ್ಧಿಸಲಿದ್ದಾರೆ.
Leave a Comment