ಜುಲೈ 8ರವರೆಗೆ ಪವರ್ ಟಿವಿ ಪ್ರಸಾರಕ್ಕೆ ಹೈಕೋರ್ಟ್ ತಡೆಯಾಜ್ಞೆ – ಹೈಕೋರ್ಟ್ ತೀರ್ಪಿಗೆ ಕಾರಣವೇನು? ಏನಿದು ಪ್ರಕರಣ?

20240626 092710
Spread the love

ನ್ಯೂಸ್ ಆ್ಯರೋ : ಪರವಾನಗಿ ನವೀಕರಿಸದ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಪವರ್‌ ಟಿ.ವಿ. ಕನ್ನಡ ಚಾನೆಲ್‌ ತನ್ನೆಲ್ಲಾ ಕಾರ್ಯಕ್ರಮಗಳ ಪ್ರಸರಣವನ್ನು ‘ತಕ್ಷಣದಿಂದಲೇ ಸ್ಥಗಿತಗೊಳಿಸಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಜೆಡಿಎಸ್‌ನ ವಿಧಾನ ಪರಿಷತ್‌ ಮಾಜಿ ಸದಸ್ಯ ಎಚ್‌.ಎಂ.ರಮೇಶ್‌ ಗೌಡ, ಅವರ ಪತ್ನಿ ಡಾ.ಎ.ರಮ್ಯಾ ರಮೇಶ್‌ ಹಾಗೂ ಐಪಿಎಸ್ ಅಧಿಕಾರಿ ಬಿ.ಆರ್‌.ರವಿಕಾಂತೇಗೌಡ ಸಲ್ಲಿಸಿದ್ದ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣಕುಮಾರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹಾಜರಾಗಿ ವಾದ ಮಂಡಿಸಿದ ಹೈಕೋರ್ಟ್‌ನ ಹಿರಿಯ ವಕೀಲರಾದ ಪ್ರಭುಲಿಂಗ ಕೆ.ನಾವದಗಿ, ಸಂದೇಶ್‌ ಜೆ.ಚೌಟ ಹಾಗೂ ಡಿ.ಆರ್.ರವಿಶಂಕರ್‌, ‘ಪ್ರತಿವಾದಿ ರಾಕೇಶ್ ಶೆಟ್ಟಿ, ಅರ್ಜಿದಾರರ ವಿರುದ್ಧ ಮಾನಹಾನಿಕರ ಸುದ್ದಿಗಳನ್ನು ಬಿತ್ತರಿಸುತ್ತಿದ್ದಾರೆ. ವಾಸ್ತವದಲ್ಲಿ ಇವರು ತಮ್ಮ ಚಾನೆಲ್‌ ಅನ್ನು ಕಾನೂನುಬಾಹಿರವಾಗಿ ನಡೆಸುತ್ತಿದ್ದಾರೆ. 2021ರಿಂದಲೂ ಚಾನೆಲ್‌ನ ಪರವಾನಗಿ ನವೀಕರಿಸಿಲ್ಲ’ ಎಂಬ ಅಂಶಗಳನ್ನು ವಿಸ್ತೃತವಾಗಿ ನ್ಯಾಯಪೀಠದ ಗಮನಕ್ಕೆ ತಂದರು.

ಸುದೀರ್ಘ ವಾದ ಆಲಿಸಿದ ನ್ಯಾಯಪೀಠ, ‘ಪ್ರತಿವಾದಿ ರಾಕೇಶ್‌ ಶೆಟ್ಟಿ, ಕೇಬಲ್ ಟೆಲಿವಿಷನ್ ನೆಟ್‌ವರ್ಕ್‌ಗಳ (ನಿಯಂತ್ರಣ) ಕಾಯ್ದೆ-1995ರ ಆದೇಶವನ್ನು ಉಲ್ಲಂಘಿಸಿರುವ ಕಾರಣ ತಕ್ಷಣದಿಂದಲೇ ತಮ್ಮ ಚಾನೆಲ್‌ನಲ್ಲಿ ಸುದ್ದಿಗಳೂ ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ಜುಲೈ 8ರವರೆಗೆ ಪ್ರಸಾರ ಮಾಡಬಾರದು’ ಎಂದು ಪ್ರಕರಣದ ಪ್ರತಿವಾದಿಯಾದ ಮೆಸರ್ಸ್‌ ಪವರ್‌ ಸ್ಮಾರ್ಟ್‌ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಪ್ರತಿನಿಧಿಯಾಗಿರುವ ಹೆಚ್ಚುವರಿ ನಿರ್ದೇಶಕ ರಾಕೇಶ್‌ ಸಂಜೀವ ಶೆಟ್ಟಿ ಅಲಿಯಾಸ್‌ ರಾಕೇಶ್‌ ಶೆಟ್ಟಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿದೆ.

Leave a Comment

Leave a Reply

Your email address will not be published. Required fields are marked *

error: Content is protected !!