
ಬಿಜೆಪಿ ನಾಯಕರ ಮಹತ್ವದ ಸಭೆ ಕರೆದ ಬಿ.ಎಲ್.ಸಂತೋಷ್ – ಯಡಿಯೂರಪ್ಪ ಗೈರಾಗುವ ಸಾಧ್ಯತೆ, ಮತ್ತೆ ಪುಟಿದೇಳುತ್ತಾ ಕಮಲ ಪಡೆ?
- ರಾಜಕೀಯ
- August 31, 2023
- No Comment
- 74
ನ್ಯೂಸ್ ಆ್ಯರೋ : ರಾಜ್ಯ ವಿಧಾನಸಭೆ ಚುನಾವಣೆಯ ಹೀನಾಯ ಸೋಲು ಬಿಜೆಪಿಗೆ ಬಲವಾದ ಹೊಡೆತ ನೀಡಿದೆ. ಕಮಲ ಪಡೆ ಈ ಸೋಲಿನ ಆಘಾತದಿಂದ ಇನ್ನೂ ಹೊರ ಬಂದಿಲ್ಲ. ಅದಕ್ಕೆ ಸಾಕ್ಷಿ ಎನ್ನುವಂತೆ ಇನ್ನೂ ವಿಪಕ್ಷ ನಾಯಕನ ಆಯ್ಕೆ ನಡೆದಿಲ್ಲ. ಇದೀಗ ಪಕ್ಷ ಸಂಘಟನೆಗೆ ಮುಂದಾಗಿರುವ ಹಿರಿಯ ನಾಯಕ ಬಿ.ಎಲ್.ಸಂತೋಷ್ ಮಹತ್ವದ ಸಭೆ ಕರೆದಿದ್ದಾರೆ.
ಸಮೀಪದಲ್ಲೇ ಇದೆ ಲೋಕಸಭೆ ಚುನಾವಣೆ
ಅತ್ತ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಜೊತೆಗೆ ಜಾರಿ ಮಾಡಿ ಜನಪ್ರಿಯತೆ ಗಿಟ್ಟಿಸುತ್ತಿರುವುದು ಒಂದೆಡೆಯಾದರೆ ಶೀಘ್ರದಲ್ಲೇ ಎದುರಾಗಲಿರುವ ಲೋಕಸಭಾ ಚುನಾವಣೆ ಬಿಜೆಪಿ ಪಾಲಿಗೆ ನಿಜಕ್ಕೂ ಅಗ್ನಿ ಪರೀಕ್ಷೆಯೇ ಆಗಿದೆ. ಅಲ್ಲದೆ ಪಕ್ಷ ಸಂಘಟನೆ ತುರ್ತು ಅಗತ್ಯವೂ ಹೌದು.
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಕೂಗು ಕೇಳಿ ಬರುತ್ತಿದ್ದು, ಆ ವಿಷಯದಲ್ಲೂ ಅಂತಿಮ ತೀರ್ಮಾನ ಪ್ರಕಟಿಸಲು ಸಾಧ್ಯವಾಗಿಲ್ಲ. ಈಗಾಗಲೇ ಆಪರೇಷನ್ ತಂತ್ರಕ್ಕೆ ಮೊರೆ ಹೋಗಿರುವ ಕಾಂಗ್ರೆಸ್ ತೆರೆಮರೆಯಲ್ಲಿ ಲೋಕಸಭೆ ಚುನಾವಣೆಗೆ ಸಿದ್ದತೆ ನಡೆಸುತ್ತಿದೆ. ಹೀಗಾಗಿ ಬಿಜೆಪಿ ನಾಯಕರನ್ನು ಒಂದುಗೂಡಿಸುವ ಜಬಾಬ್ದಾರಿಯನ್ನು ಬಿ.ಎಲ್.ಸಂತೋಷ್ ಹೆಗಲಿಗೆ ಬಿದ್ದಿದೆ. ಈ ಹಿನ್ನಲೆಯಲ್ಲಿ ಅವರು ಇಂದು (ಆಗಸ್ಟ್ 31) ಸಭೆ ಕರೆದಿದ್ದಾರೆ.
ಯಡಿಯೂರಪ್ಪ ಗೈರು?
ಅಚ್ಚರಿ ಎಂದರೆ ಇಂದಿನ ಸಭೆಗೆ ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಗೈರಾಗಲಿದ್ದಾರೆ. ಶಿವಮೊಗ್ಗ ಪ್ರವಾಸ ಹಿನ್ನಲೆಯಲ್ಲಿ ಅವರು ಸಭೆಯಿಂದ ದೂರ ಉಳಿಯುತ್ತಿದ್ದು, ರಾಜಕೀಯವಾಗಿ ಬೇರೆಯದೇ ಸಂದೇಶ ರವಾನೆಯಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.
ನಾಯಕರಿಗೆ ಆಹ್ವಾನ
ಇಂದಿನ ಸಭೆಗೆ 224 ಕ್ಷೇತ್ರದ ಎಲ್ಲಾ ಬಿಜೆಪಿ ನಾಯಕರನ್ನು ಆಹ್ವಾನಿಸಲಾಗಿದೆ. ಲೋಕಸಭೆ ಚುನಾವಣೆಗಾಗಿ ಸಿದ್ದತೆ ನಡೆಸಲು ಈ ಸಭೆ ನೆರವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬೂತ್ ಮಟ್ಟದಲ್ಲಿ ಮತದಾರರನ್ನು ಕ್ರೂಢೀಕರಿಸಲು ಸಂತೋಷ್ ಸೂತ್ರ ಹೇಳಿಕೊಡಲಿದ್ದಾರೆ ಎನ್ನಲಾಗಿದೆ.
ಮಹತ್ವದ ಜವಾಬ್ದಾರಿ
ಈ ಸಭೆಯಲ್ಲಿ ಹೊಸ ಮತದಾರರನ್ನು ವೋಟರ್ ಲಿಸ್ಟ್ ಗೆ ಸೇರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು. ಮನೆ ಮನೆಗೆ ಭೇಟಿ ನೀಡಿ ಹೊಸ ಮತದಾರರನ್ನು ಪರಿಶೀಲಿಸುವ ಬಗ್ಗೆ ಜವಾಬ್ದಾರಿ ಹಂಚಿಕೆ ಮಾಡಲಾಗುವುದು. ಅಲ್ಲದೆ ಮತದಾರರ ಪಟ್ಟಿಗಾಗಿಯೇ ಸಮಿತಿ ರಚಿಸುವ ಪ್ರಸಾವವಿದೆ. ಆಯಾ ಕ್ಷೇತ್ರದ ಶಾಸಕರು, ಮಾಜಿ ಶಾಸಕರಿಗೆ ಈ ಹೊಣೆ ಹಂಚಿಕೆಯಾಗುವ ಸಾಧ್ಯತೆ ಇದೆ.