ಇದು ವಿಲಕ್ಷಣ ʼಡೀಪ್ ಫ್ರೈಡ್ ಫ್ರಾಗ್ʼ; ಕಪ್ಪೆ ಪಿಜ್ಜಾವನ್ನು ಪರಿಚಯಿಸಿದ ಪಿಜ್ಜಾ ಹಟ್
ನ್ಯೂಸ್ ಆ್ಯರೋ: ಚೀನಾ ತನ್ನ ವಿಲಕ್ಷಣ ಆಹಾರ ಪದ್ಧತಿಯಿಂದಲೇ ಫೇಮಸ್ ಆಗಿದೆ. ಹುಳ, ಕಪ್ಪೆ, ಕೀಟಗಳಿಂದ ಹಿಡಿದು ಹಾವು, ನಾಯಿ ಮಾಂಸದವರೆಗೆ ವಿಲಕ್ಷಣ ಆಹಾರಗಳನ್ನು ತಿನ್ನುವುದೆಂದರೆ ಇಲ್ಲಿನ ಜನರಿಗೆ ಪಂಚಪ್ರಾಣ ಅಂತಾನೇ ಹೇಳ್ಬೋದು. ಇವರುಗಳು ತಾವು ಸೇವಿಸುವ ವಿಯರ್ಡ್ ಫುಡ್‌ಗಳಿಂದಲೇ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ. ಇದೀಗ ಅಂತಹದ್ದೇ ಸುದ್ದಿಯೊಂದು ಸಖತ್ ವೈರಲ್ ಆಗುತ್ತಿದೆ.
ಹೌದು. . ಚೀನಾದ ಪಿಜ್ಜಾ ಹಟ್ ʼಗಾಬ್ಲಿನ್ ಪಿಜ್ಜಾʼ ಎಂಬ ಹೆಸರಿನ ಕಪ್ಪೆಯ ಪಿಜ್ಜಾವನ್ನು ಪರಿಚಯಿಸಿದೆ. ಚೀನಾದ ಈ ಹೊಸ ಪಿಜ್ಜಾ ಪಾಕ ವಿಧಾನವು ಮೊಬೈಲ್ ಗೇಮ್ ಡಂಜಿಯನ್ಸ್ ಮತ್ತು ಫೈಟರ್ಸ್ ಒರಿಜಿನ್ಸ್ ಬ್ರ್ಯಾಂಡ್‌ಗಳ ಸಹಯೋಗದ ಭಾಗವಾಗಿದೆ. ಇದು ಪಿಜ್ಜಾ ಪ್ರಿಯರನ್ನು ಮತ್ತು ಪಾಪ್ ಸಂಸ್ಕೃತಿಯ ಅಭಿಮಾನಿಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದೆ.
ನವೆಂಬರ್ 18 ರಂದು ಈ ಪಿಜ್ಜಾವನ್ನು ಪರಿಚಯಿಸಲಾಗಿದ್ದು, ಚೀನಾದ ಮೂರು ಪಿಜ್ಜಾ ಹಟ್ ಔಟ್‌ಲೆಟ್‌ಗಳಲ್ಲಿ ಈ ಗಾಬ್ಲಿನ್ ಪಿಜ್ಜಾ ಲಭ್ಯವಿದೆ. ಇದರ ಬೆಲೆ 169 ಯುವಾನ್ (ಅಂದಾಜು 2,000 ರೂ.) ಆಗಿದೆ.
ಈ ಕುರಿತ ಪೋಸ್ಟ್ ಒಂದನ್ನು ಜೇಮ್ಸ್ ವಾಕರ್ (jwalkermobile) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಚೀನಾದಲ್ಲಿ ಅಗ್ರಸ್ಥಾನದಲ್ಲಿರುವ ಈ ಕಪ್ಪೆ ಪಿಜ್ಜಾವನ್ನು ನೀವು ಪ್ರಯತ್ನಿಸುವಿರಾ?” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ಆಗುತ್ತಿರುವ ಫೋಟೋದಲ್ಲಿ ಪಿಜ್ಜಾದ ಮೇಲೆ ಟಾಪಿಂಗ್ ರೀತಿಯಲ್ಲಿ ಡೀಪ್ ಫ್ರೈಡ್ ಕಪ್ಪೆಯನ್ನು ಇಟ್ಟಿರುವಂತಹ ದೃಶ್ಯವನ್ನು ಕಾಣಬಹುದು.
ನವೆಂಬರ್ 21 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 17 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪೈನಾಪಲ್ ಪಿಜ್ಜಾವನ್ನು ಬೇಕಾದ್ರೆ ತಿನ್ಬೋದು, ಆದ್ರೆ ಇದನ್ನು ಮಾತ್ರ ತಿನ್ನಲಾರೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಛೀ ಛೀ… ಇದನ್ನು ನೋಡುವಾಗಲೇ ಅಸಹ್ಯವಾಗುತ್ತಿದೆʼ ಎಂದು ಹೇಳಿದ್ದಾರೆ.
Leave a Comment