ಇಂದಿನಿಂದ ದೇಶಾದ್ಯಂತ ಹೊಸ ಕ್ರಿಮಿನಲ್ ಕಾನೂನು ಜಾರಿ – IPC, CRPC ರದ್ದು : ಹೊಸ ಕ್ರಿಮಿನಲ್ ಕಾನೂನು ಹೇಗಿರಲಿದೆ ಗೊತ್ತಾ?

IMG 20240701 WA0019
Spread the love

ನ್ಯೂಸ್ ಆ್ಯರೋ : ದೇಶಾದ್ಯಂತ ಹೊಸ ಕ್ರಿಮಿನಲ್ ಕಾನೂನು ಇಂದಿನಿಂದ ಜಾರಿ ಆಗಲಿದೆ. ಐಪಿಸಿಯನ್ನು ಭಾರತೀಯ ನ್ಯಾಯ ಸಂಹಿತೆ-2023, ಸಿಆರ್‌ಪಿಸಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023 ಹಾಗೂ ಭಾರತೀಯ ಸಾಕ್ಷ್ಯ ಕಾಯ್ದೆಯನ್ನು ಭಾರತೀಯ ಸಾಕ್ಷ್ಯ ವಿಧೇಯಕ-2023 ಎಂಬುದಾಗಿ ಮಾರ್ಪಡಿಸಲಾಗಿದೆ.

ಇಂದಿನಿಂದ ಭಾರತೀಯ ನ್ಯಾಯ ಸಂಹಿತಾ, ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ ಮತ್ತು ಭಾರತೀಯ ಸಾಕ್ಷಿ ಕಾಯಿದೆಯು ಜಾರಿಗೆ ಬರಲಿವೆ ಎನ್ನಲಾಗಿದೆ. ಜೊತೆಗೆ ಹೊಸ ಕ್ರಿಮಿನಲ್ ಕಾನೂನುಗಳ ಪ್ರಮುಖ ಲಕ್ಷಣಗಳ ಬಗ್ಗೆ ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಗಣ್ಯ ವ್ಯಕ್ತಿಗಳಿಗೆ ತಿಳಿಸಲು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಬ್ರಿಟಿಷರ ಕಾಲದ IPC-ಭಾರತೀಯ ನ್ಯಾಯ ಸಂಹಿತಾ, CrPC-ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ, ಇಂಡಿಯನ್ ಎವಿಡೆನ್ಸ್ ಆಯಕ್ಟ್-ಭಾರತೀಯ ಸಾಕ್ಷ್ಯ ಅಧಿನಿಯಮ ಅನ್ನು ಬದಲಿಸುತ್ತವೆ. ಈಗಿರುವ ಕಾಯಿದೆಗಳಿಗೆ ಹೋಲಿಸಿದರೆ ಈ ಮೂರು ಹೊಸ ಕಾನೂನುಗಳಲ್ಲಿ ಹಲವು ವಿನೂತನ ಉದ್ದೇಶಗಳಿವೆ.

ಹೊಸ ಕಾಯ್ದೆಗಳು ದೇಶದ ಕಾನೂನು ಕ್ಷೇತ್ರದಲ್ಲಿ ದೊಡ್ಡ ರೂಪಾಂತರಕ್ಕೆ ಕಾರಣವಾಗಲಿವೆ. ಇವುಗಳ ಮೂಲಕ ಆಧುನಿಕ ನ್ಯಾಯ ವ್ಯವಸ್ಥೆ ಜಾರಿಗೆ ಬರಲಿದೆ. ಹೊಸ ವ್ಯವಸ್ಥೆಯಲ್ಲಿ ಶೂನ್ಯ ಎಫ್‌ಐಆರ್‌, ಆನ್‌ಲೈನ್‌ನಲ್ಲೇ ಪೊಲೀಸರಿಗೆ ದೂರು ನೀಡುವುದು, ಎಸ್‌ಎಂಎಸ್‌ ಮೂಲಕ ಸಮನ್ಸ್‌ ಜಾರಿ, ಅಪರಾಧ ಸ್ಥಳದ ಕಡ್ಡಾಯ ವಿಡಿಯೋ ಚಿತ್ರೀಕರಣ ಮುಂತಾದ ನಿಯಮಗಳು ಇರಲಿವೆ. ಬದಲಾದ ಕಾಲಕ್ಕೆ ತಕ್ಕಂತೆ ಕಾನೂನು ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಾಗಿದೆ.

ಹೊಸ ಕಾಯ್ದೆಗಳ ಜಾರಿ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಈ ಕಾನೂನುಗಳನ್ನು ಭಾರತೀಯರೇ ಭಾರತೀಯರಿಗಾಗಿ ರೂಪಿಸಿ, ಭಾರತೀಯ ಸಂಸತ್ತು ಇವುಗಳನ್ನು ಅಂಗೀಕರಿಸಿದೆ. ತನ್ಮೂಲಕ ಬ್ರಿಟಿಷ್‌ ಕಾಲದ ಕ್ರಿಮಿನಲ್‌ ಕಾಯ್ದೆಗಳಿಗೆ ವಿದಾಯ ಹೇಳಲಾಗಿದೆ. ಬ್ರಿಟಿಷ್‌ ಕಾಯ್ದೆಗಳಲ್ಲಿ ಶಿಕ್ಷೆಗೆ ಮಹತ್ವ ನೀಡಲಾಗಿದ್ದರೆ, ಹೊಸ ಕಾಯ್ದೆಗಳಲ್ಲಿ ನ್ಯಾಯಕ್ಕೆ ಮಹತ್ವ ನೀಡಲಾಗಿದೆ. ಕಾನೂನು ಕ್ಷೇತ್ರದಲ್ಲಿ ಇವು ಆಮೂಲಾಗ್ರ ಬದಲಾವಣೆ ತರಲಿವೆ. ಹೊಸ ಕಾಯ್ದೆಗಳ ಆತ್ಮ, ದೇಹ ಹಾಗೂ ಸ್ಫೂರ್ತಿ ಎಲ್ಲವೂ ಭಾರತೀಯವಾಗಿವೆ’ ಎಂದು ಹೇಳಿದ್ದಾರೆ.

ಹೊಸ ಕಾಯ್ದೆಗಳ ಪ್ರಕಾರ, ಕ್ರಿಮಿನಲ್‌ ಪ್ರಕರಣಗಳಲ್ಲಿ ವಿಚಾರಣೆ ಮುಗಿದು 45 ದಿನದೊಳಗೆ ಕೋರ್ಟ್‌ಗಳು ತೀರ್ಪು ನೀಡಬೇಕು. ಕೋರ್ಟ್‌ನಲ್ಲಿ ಮೊದಲ ವಿಚಾರಣೆ ನಡೆದು 60 ದಿನದೊಳಗೆ ಪೊಲೀಸರು ಆರೋಪಪಟ್ಟಿ ಸಲ್ಲಿಸಬೇಕು. ಅತ್ಯಾಚಾರ ಪ್ರಕರಣಗಳ ಸಂತ್ರಸ್ತರ ಹೇಳಿಕೆಯನ್ನು ಆಕೆಯ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೇ ದಾಖಲಿಸಿಕೊಳ್ಳಬೇಕು. ವೈದ್ಯಕೀಯ ವರದಿ ಏಳು ದಿನದೊಳಗೆ ಬರಬೇಕು.

ಐಪಿಸಿಯಲ್ಲಿ ಪರಸ್ಪರ ವೈರುಧ್ಯ ಅಥವಾ ಸಮಾನತೆಯಿದ್ದ ಸೆಕ್ಷನ್‌ಗಳನ್ನು ಭಾರತೀಯ ನ್ಯಾಯಸಂಹಿತೆಯಲ್ಲಿ ತೆಗೆದು ಸರಳೀಕರಣಗೊಳಿಸಲಾಗಿದೆ. ಐಪಿಸಿಯಲ್ಲಿ 511 ಸೆಕ್ಷನ್‌ಗಳಿದ್ದರೆ, ಭಾರತೀಯ ನ್ಯಾಯ ಸಂಹಿತೆಯಲ್ಲಿ ಕೇವಲ 358 ಸೆಕ್ಷನ್‌ಗಳಿವೆ.

ಐಪಿಸಿಯಲ್ಲಿ ಮದುವೆಯ ಸುಳ್ಳು ಭರವಸೆ, ಅಪ್ರಾಪ್ತರ ಮೇಲಿನ ಸಾಮೂಹಿಕ ಅತ್ಯಾಚಾರ, ಸಾಮೂಹಿಕ ಹತ್ಯೆ, ಸರಗಳವು ಇತ್ಯಾದಿ ಪ್ರಕರಣಗಳನ್ನು ದಾಖಲಿಸಿಕೊಂಡರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ದಿಷ್ಟ ಸೆಕ್ಷನ್‌ಗಳಿರಲಿಲ್ಲ. ಹೊಸ ಕಾಯ್ದೆಯಲ್ಲಿ ಅವುಗಳಿಗೆ ನಿರ್ದಿಷ್ಟ ಸೆಕ್ಷನ್‌ ಸೇರಿಸಲಾಗಿದೆ. ಮದುವೆಯ ಭರವಸೆ ನೀಡಿ ಲೈಂಗಿಕ ಸಂಪರ್ಕ ನಡೆಸಿ ಮಹಿಳೆಯನ್ನು ತ್ಯಜಿಸುವುದರ ವಿರುದ್ಧ ಪ್ರತ್ಯೇಕ ಸೆಕ್ಷನ್‌ ಸೇರಿಸಲಾಗಿದೆ.

ಹೊಸ ಕಾಯ್ದೆಯಡಿ ಜನರು ಪೊಲೀಸ್‌ ಠಾಣೆಗೇ ಹೋಗಿ ದೂರು ನೀಡಬೇಕಿಲ್ಲ. ಎಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕವೂ ದೂರು ನೀಡಬಹುದು. ಅದರಿಂದಾಗಿ ಸುಲಭ ಹಾಗೂ ತ್ವರಿತವಾಗಿ ಪ್ರಕರಣ ದಾಖಲಿಸುವುದು ಸಾಧ್ಯವಾಗುತ್ತದೆ. ಹಾಗೆಯೇ, ಶೂನ್ಯ ಎಫ್‌ಐಆರ್‌ ಸೌಕರ್ಯದಡಿ ಜನರು ಯಾವುದೇ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಬಹುದು. ಪೊಲೀಸ್‌ ಠಾಣೆಯ ವ್ಯಾಪ್ತಿ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.

ಪೊಲೀಸರಿಂದ ಬಂಧನಕ್ಕೊಳಗಾದವರು ತಮ್ಮ ಆಯ್ಕೆಯ ವ್ಯಕ್ತಿಗೆ ಬಂಧನದ ಬಗ್ಗೆ ಮಾಹಿತಿ ನೀಡುವ ಅವಕಾಶವನ್ನು ಹಕ್ಕಿನ ರೂಪದಲ್ಲಿ ನೀಡಲಾಗಿದೆ. ಇದರಿಂದಾಗಿ, ಬಂಧಿತರಿಗೆ ತಕ್ಷಣ ತಮ್ಮವರಿಂದ ನೆರವು ಲಭಿಸಲಿದೆ. ಇದಲ್ಲದೆ, ಯಾರನ್ನೇ ಬಂಧಿಸಿದರೂ ಪೊಲೀಸ್‌ ಠಾಣೆ ಹಾಗೂ ಜಿಲ್ಲಾ ಪೊಲೀಸ್‌ ಮುಖ್ಯ ಕಾರ್ಯಾಲಯದಲ್ಲಿ ಅದರ ವಿವರವನ್ನು ಪ್ರದರ್ಶಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಜನರಿಗೆ ಬಂಧನದ ಬಗ್ಗೆ ಸುಲಭವಾಗಿ ಮಾಹಿತಿ ಸಿಗಲಿದೆ.

ಮೂರು ಕ್ರಿಮಿನಲ್ ಕಾನೂನುಗಳನ್ನು ಕಳೆದ ವರ್ಷವೇ ಸಂಸತ್ತು ಅಂಗೀಕರಿಸಿತ್ತು. ಅದೇ ತಿಂಗಳು ರಾಷ್ಟ್ರಪತಿಗಳ ಒಪ್ಪಿಗೆಯನ್ನೂ ಸಹ ಪಡೆಯಲಾಗಿತ್ತು. ಆದರೆ, ಅವು ಜಾರಿಗೆ ಬಂದಿರಲಿಲ್ಲ. ಈ ವರ್ಷ ಫೆಬ್ರವರಿ 25ರಂದು ಮೂರು ಕಾನೂನುಗಳು ಜುಲೈ 1ರಂದು ಜಾರಿಗೆ ಬರುತ್ತವೆ ಎಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿತ್ತು.

ಮೂರು ಕ್ರಿಮಿನಲ್ ಕಾನೂನುಗಳನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿತ್ತು. ಅದೇ ತಿಂಗಳು ರಾಷ್ಟ್ರಪತಿಗಳ ಒಪ್ಪಿಗೆ ಪಡೆಯಿತು. ಆದರೆ, ಅವು ಜಾರಿಗೆ ಬಂದಿರಲಿಲ್ಲ. ಈ ವರ್ಷ ಫೆಬ್ರವರಿ 25ರಂದು ಮೂರು ಕಾನೂನುಗಳು ಜುಲೈ 1ರಂದು ಜಾರಿಗೆ ಬರುತ್ತವೆ ಎಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿತ್ತು

ಏನಿತ್ತು? ಏನಾಯಿತು?

  • ಭಾರತೀಯ ದಂಡ ಸಂಹಿತೆ – ಭಾರತೀಯ ನ್ಯಾಯ ಸಂಹಿತೆ
  • ಅಪರಾಧ ಪ್ರಕ್ರಿಯಾ ಸಂಹಿತೆ – ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ
  • ಸಾಕ್ಷ್ಯ ಕಾಯ್ದೆ – ಭಾರತೀಯ ಸಾಕ್ಷ್ಯ ಅಧಿನಿಯಮ

ಏನೆಲ್ಲ ಹೊಸತು?

  • ಶೂನ್ಯ ಎಫ್‌ಐಆರ್‌
  • ಕಡ್ಡಾಯ ವೀಡಿಯೋ ಚಿತ್ರೀಕರಣ
  • ಆನ್‌ಲೈನ್‌ ಮೂಲಕ ದೂರು ದಾಖಲು
  • ಎಸ್‌ಎಂಎಸ್‌ ಮೂಲಕ ಸಮನ್ಸ್‌
  • 45 ದಿನಗಳ ಒಳಗೆ ಶಿಕ್ಷೆ ಘೋಷಣೆ
  • 60 ದಿನಗಳ ಒಳಗೆ ಆರೋಪಪಟ್ಟಿ ಸಲ್ಲಿಕೆ

Leave a Comment

Leave a Reply

Your email address will not be published. Required fields are marked *

error: Content is protected !!