ಮುಡಾ ಸೈಟು ಹಗರಣ ಬಯಲಿಗೆಳೆದ ಜಿಲ್ಲಾಧಿಕಾರಿಗೆ ವರ್ಗಾವಣೆ ಶಿಕ್ಷೆ – ದಕ್ಷ ಅಧಿಕಾರಿ ಡಾ. ರಾಜೇಂದ್ರ ಕೆ.ವಿ. ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ
ನ್ಯೂಸ್ ಆ್ಯರೋ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಬಳಿಕ ನಿಧಾನವಾಗಿ ಟ್ರ್ಯಾಕ್ ಗೆ ಮರಳಲು ಯತ್ನಿಸುತ್ತಿರುವ ಬಿಜೆಪಿಗೆ ಮುಡಾ ಹಗರಣ ಬೂಸ್ಟ್ ನೀಡಿದ್ದು, ಸಿಎಂ ಸಿದ್ದರಾಮಯ್ಯ ವಿರುದ್ಧ ಕೇಸರಿ ಪಡೆ ಮುಗಿಬಿದ್ದಿದ್ದರೆ ಅತ್ತ ಮುಡಾ ಸೈಟು ಹಗರಣ ಬಯಲಿಗೆಳೆದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರಿಗೆ ವರ್ಗಾವಣೆ ಶಿಕ್ಷೆ ಲಭಿಸಿದೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ರಾಜ್ಯ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿಗೆ ಅಕ್ರಮವಾಗಿ ಸೈಟು ಹಂಚಿಕೆ ಮಾಡಿಕೊಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಹೀಗಾಗಿ ಈ ವಿಚಾರ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರವುಂಟು ಮಾಡಿದೆ.
ಹಗರಣವನ್ನು ಸಿಬಿಐಗೆ ವಹಿಸಬೇಕು ಎಂದು ಈಗಾಗಲೇ ಬಿಜೆಪಿ ಹೋರಾಟ ನಡೆಸುತ್ತಿದೆ. ಆದರೆ ಇದನ್ನು ಸಿಬಿಐಗೆ ವಹಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪಟ್ಟುಹಿಡಿದಿದ್ದಾರೆ. ಇದರಲ್ಲಿ ನನ್ನ ತಪ್ಪಿಲ್ಲ. ಮುಡಾ ತಪ್ಪು ಮಾಡಿದೆ. ಹಾಗೆ ನೋಡಿದರೆ ನಮಗೆ 62 ಕೋಟಿ ರೂ. ಪರಿಹಾರ ನೀಡಬೇಕು ಎಂದು ಸಿದ್ದರಾಮಯ್ಯ ನಿನ್ನೆ ಹೇಳಿಕೆ ನೀಡಿದ್ದರು.
ಇದರ ನಡುವೆ ಈ ಹಗರಣವನ್ನು ಬಯಲಿಗೆಳೆದ ಡಿಸಿ ರಾಜೇಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ. ಲೋಕಸಭೆ ಚುನಾವಣೆ ಬಳಿಕ 21 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲು ಸರ್ಕಾರ ಆದೇಶ ನೀಡಿದ್ದು, ಆ ಪೈಕಿ ರಾಜೇಂದ್ರ ಕೂಡಾ ಸೇರಿದ್ದಾರೆ.
ಸದ್ಯ ರಾಜೇಂದ್ರ ಕೆ.ವಿ ಅವರನ್ನು ಪ್ರವಾಸೋದ್ಯಮ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾಯಿಸಲಾಗಿದ್ದು, ಒಳ್ಳೆಯ ಕೆಲಸ ಮಾಡಿದ ಜಿಲ್ಲಾಧಿಕಾರಿಗೆ ವರ್ಗಾವಣೆ ಶಿಕ್ಷೆ ನೀಡಿದಂತಾಗಿದೆ. ಡಾ. ರಾಜೇಂದ್ರ ಕೆ.ವಿ ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿಯೂ ದಕ್ಷ ಆಡಳಿತ ನೀಡಿದ್ದು, ಕರಾವಳಿಗರ ಪ್ರೀತಿಗೆ ಪಾತ್ರರಾಗಿದ್ದರು.
Leave a Comment