ಕರ್ನಾಟಕದಲ್ಲಿ ಬಿಯರ್ ಮಾರಾಟ ಭರ್ಜರಿ ಹೆಚ್ಚಳ: ಅಬಕಾರಿಗೆ ಹರಿದು ಬಂತು ಆದಾಯ
ನ್ಯೂಸ್ ಆ್ಯರೋ: ವಾತಾವರಣ, ಸಾಲು ರಜೆಗಳು ಇತ್ಯಾದಿ ಹಲವು ಕಾರಣಗಳಿಂದಾಗಿ ಕರ್ನಾಟಕದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಿಯರ್ ಮಾರಾಟದಲ್ಲಿ ಏರಿಕೆಯಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ 2024-25ರ ಹಣಕಾಸು ವರ್ಷದಲ್ಲಿ ಒಟ್ಟಾರೆ ಮದ್ಯ ಮಾರಾಟದಲ್ಲಿ ಶೇ 5.55 ರಷ್ಟು ಏರಿಕೆಯಾಗಿದೆ. ಅಬಕಾರಿ ಇಲಾಖೆ ದಾಖಲೆಗಳ ಪ್ರಕಾರ, ಏಪ್ರಿಲ್ನಿಂದ ಸೆಪ್ಟೆಂಬರ್ ವರೆಗೆ 921.90 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ.
ಬಿಯರ್ ಮಾರಾಟದಲ್ಲಿ ತೀವ್ರ ಏರಿಕೆ ಕಂಡುಬಂದಿದೆ ಮತ್ತು ಭಾರತೀಯ ನಿರ್ಮಿತ ಮದ್ಯದ (ಐಎಂಎಲ್) ಮಾರಾಟದಲ್ಲಿ ಕುಸಿತ ಕಂಡುಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಬಿಯರ್ ಮಾರಾಟದಲ್ಲಿ ಶೇ 14.90 ಏರಿಕೆ ಮತ್ತು ಐಎಂಎಲ್ ಮಾರಾಟದಲ್ಲಿ ಶೇ 2 ಇಳಿಕೆಯಾಗಿದೆ. ಕಳೆದ ಆರು ತಿಂಗಳಲ್ಲಿ, ಬಿಯರ್ ಮಾರಾಟವು ಶೇ 15 ರಷ್ಟು ಬೆಳವಣಿಗೆಯನ್ನು ತೋರಿಸಿದೆ. ಇದು ಹವಾಮಾನ, ವೆಚ್ಚ, ರಜಾದಿನಗಳು ಮತ್ತು ಇತರವುಗಳನ್ನು ಒಳಗೊಂಡಂತೆ ಅನೇಕ ಅಂಶಗಳಿಂದಾಗಿ ಆಗಿದೆ ಎಂದು ಅಬಕಾರಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ಎರಡು ತಿಂಗಳ ಹಿಂದೆ ಪ್ರೀಮಿಯಂ ಮತ್ತು ಸೆಮಿ ಪ್ರೀಮಿಯಂ ಬ್ರಾಂಡ್‌ಗಳ ಮೇಲಿನ ಬೆಲೆ ಏರಿಕೆ, ಕಡಿಮೆ ಉತ್ಪಾದನೆ ಮತ್ತು ಸ್ಟಾಕ್‌ಗಳಿಂದಾಗಿ ಐಎಂಎಲ್ ಮಾರಾಟದಲ್ಲಿ ಕುಸಿತವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2023 ರ ಏಪ್ರಿಲ್-ಸೆಪ್ಟೆಂಬರ್ ವರೆಗೆ ಮದ್ಯ ಮಾರಾಟದಿಂದ 16,611.11 ಕೋಟಿ ರೂ. ಆದಾಯ ಸಂಗ್ರಹವಾಗಿದ್ದರೆ, ಈ ವರ್ಷದ ಅದೇ ಅವಧಿಯಲ್ಲಿ 17,533.01 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಆದಾಯದಲ್ಲಿ 921.90 ಕೋಟಿ ರೂ. ಅಥವಾ ಶೇ 5.55 ರಷ್ಟು ಏರಿಕೆಯಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಶೇ 48.15ರಷ್ಟು ಮಾರಾಟ ಗುರಿ ಸಾಧಿಸಲಾಗಿದ್ದು, ಈ ವರ್ಷ ಶೇ 45.51ರಷ್ಟು ಗುರಿ ಸಾಧಿಸಲಾಗಿದೆ. 2024 ರ ಏಪ್ರಿಲ್ನಲ್ಲಿ ಸಂಚಿತ ಬೆಳವಣಿಗೆಯು ಶೇ 28.84 ಆಗಿದೆ. 2023 ರ ಏಪ್ರಿಲ್ಗೆ ಹೋಲಿಸಿದರೆ ವ್ಯತ್ಯಾಸವು ಶೇ 11.13 ಆಗಿದೆ ಎಂದು ಇಲಾಖೆ ತಿಳಿಸಿದೆ.
Leave a Comment