ದಸರಾ 2024 ಅಂಬಾರಿ ಮೆರವಣಿಗೆಯ ಗಜಪಡೆಯ ಪಟ್ಟಿ ಬಿಡುಗಡೆ – ಈ ಬಾರಿ ಗಜಪಡೆಯ ಸಾರಥಿ ಯಾರು?
ನ್ಯೂಸ್ ಆ್ಯರೋ : ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರು ಪ್ರಪಂಚದಾದ್ಯಂತ ಗುರುತಿಸಲ್ಪಡುವ ದಸರಾ ಆಚರಣೆಯ ಈ ಬಾರಿಯ ವೇಳಾಪಟ್ಟಿ ಘೋಷಣೆಯಾಗಿದ್ದು, ಅಕ್ಟೋಬರ್ 3ರಂದು ಈ ಬಾರಿಯ ದಸರಾ ಉದ್ಘಾಟನೆಯಾಗಲಿದೆ. ಹಾಗೆಯೇ ಅಕ್ಟೋಬರ್ 12ರಂದು ಐತಿಹಾಸಿಕ ಜಂಬೂ ಸವಾರಿ ನಡೆಯಲಿದ್ದು, ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಸೋಮವಾರ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ 2024ರ ಮೈಸೂರು ದಸರಾ ಜಂಬೂ ಸವಾರಿ ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದರು. ಚಿನ್ನದ ಅಂಬಾರಿಯನ್ನು ‘ಅಭಿಮನ್ಯು’ ಹೊರಲಿದ್ದು, ಗಜಪಡೆಯ ಸಾರಥಿಯಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾನೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಮೈಸೂರು ದಸರಾ-2024ರ ಉನ್ನತ ಮಟ್ಟದ ಸಭೆ ನಡೆಯಿತು. ಈ ಬಾರಿ ರಾಜ್ಯದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ನಾಡಹಬ್ಬ ಮೈಸೂರು ದಸರಾವನ್ನು ವಿಜೃಂಭಣೆಯಿಂದ, ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಆಗಸ್ಟ್ 21 ರಂದು ಬೆಳಗ್ಗೆ 10.10 ಗಂಟೆಯಿಂದ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣಕ್ಕೆ ಪೂಜೆ ಮಾಡಲಾಗುತ್ತದೆ. ಅಕ್ಟೋಬರ್ 3 ರಿಂದ 12ರ ವರೆಗೆ 2024ನೇ ಸಾಲಿನ ದಸರಾ ಮಹೋತ್ಸವ ನಡೆಯಲಿದೆ. ಸಂಪ್ರದಾಯದಂತೆ 9 ದಿನ ಕಾರ್ಯಕ್ರಮಗಳು ಹಾಗೂ 10ನೇ ದಿನ ಜಂಬೂ ಸವಾರಿ ನಡೆಯಲಿದೆ. ಅಕ್ಟೋಬರ್ 12ರಂದು ಮಧ್ಯಾಹ್ನ 1.41 ರಿಂದ 2.10 ಗಂಟೆಯ ವರೆಗೆ ನಂದಿ ಧ್ವಜ ಪೂಜೆ ನಡೆಯಲಿದ್ದು, ಬಳಿಕ ದಸರಾ ಜಂಬೂ ಸವಾರಿಗೆ ಚಾಲನೆ ದೊರೆಯಲಿದೆ.
ಮೈಸೂರು ದಸರಾ 2024ರಲ್ಲಿ ಪಾಲ್ಗೊಳ್ಳುವ ಆನೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ನಾಡದೇವಿ ಚಾಮುಂಡೇಶ್ವರಿ ವಿಗ್ರಹವುಳ್ಳ ಚಿನ್ನದ ಅಂಬಾರಿಯನ್ನು ‘ಅಭಿಮನ್ಯು’ ಹೊರಲಿದ್ದು, ದಸರಾ ಗಜಪಡೆಯ ಕ್ಯಾಪ್ಟನ್ ಆಗಲಿದ್ದಾನೆ.
ಮಹೇಂದ್ರ, ಗೋಪಿ, ಭೀಮ, ಪ್ರಶಾಂತ, ಧನಂಜಯ, ಸುಗ್ರೀವ, ಹಿರಣ್ಯ, ರೋಹಿತ, ಏಕಲವ್ಯ ಕಂಜನ್, ಲಕ್ಷ್ಮೀ, ವರಲಕ್ಷ್ಮೀ ಮತ್ತು ದೊಡ್ಡ ಹರವೇ, ಲಕ್ಷ್ಮೀ ಆನೆಗಳು ಈ ಬಾರಿಯ ದಸರಾದಲ್ಲಿ ಪಾಲ್ಗೊಳ್ಳಲಿವೆ. ಮೊದಲ ತಂಡದಲ್ಲಿ 9 ಆನೆಗಳು ಹಾಗೂ ಎರಡನೇ ಹಂತದಲ್ಲಿ 5 ಆನೆಗಳು ಮೈಸೂರು ನಗರಕ್ಕೆ ಬಂದು ತಲುಪಲಿವೆ.
Leave a Comment