ಮಸ್ಕ್, ವಿವೇಕ್ ರಾಮಸ್ವಾಮಿಗೆ ಮಹತ್ವದ ಹುದ್ದೆ; ಡೊನಾಲ್ಡ್ ಟ್ರಂಪ್ ಹೇಳಿದ್ದೇನು?
ನ್ಯೂಸ್ ಆ್ಯರೋ: ಟೆಸ್ಲಾ ಮಾಲೀಕ ಎಲಾನ್ ಮಸ್ಕ್ ಮತ್ತು ಅನಿವಾಸಿ ಭಾರತೀಯ ಉದ್ಯಮಿ ವಿವೇಕ್ ರಾಮಸ್ವಾಮಿ ಅವರು ಅಮೆರಿಕ ಸರ್ಕಾರದ ಕಾರ್ಯಕ್ಷಮತೆ ಮೇಲುಸ್ತುವಾರಿ ಇಲಾಖೆಯನ್ನು ಮುನ್ನಡೆಸಲಿದ್ದಾರೆ ಎಂದು ಅಮೆರಿಕ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಘೋಷಿಸಿದ್ದಾರೆ.
‘ಈ ಅದ್ಭುತ ಅಮೆರಿಕನ್ನರು ನನ್ನ ಆಡಳಿತದಲ್ಲಿ ‘ಸೇವ್ ಅಮೆರಿಕ’ ಚಳವಳಿಗೆ ಅಗತ್ಯವಿರುವ ಅಧಿಕಾರಶಾಹಿ ಪ್ರವೃತ್ತಿಯನ್ನು ತೆಗೆದುಹಾಕಲು, ಅನಗತ್ಯ ನಿಯಮಗಳನ್ನು ಕಿತ್ತೊಗೆಯಲು, ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲು ಹಾಗೂ ಫೆಡರಲ್ ಏಜೆನ್ಸಿಗಳನ್ನು ಪುನರ್ ರಚಿಸಲು ನೆರವಾಗುತ್ತಾರೆ’ ಎಂದು ಟ್ರಂಪ್ ಹೇಳಿದ್ದಾರೆ.
‘ರಿಪಬ್ಲಿಕನ್ ಪಕ್ಷ ಈ ಇಲಾಖೆಯ ಬಗ್ಗೆ ಬಹಳ ಸಮಯದಿಂದ ಕನಸು ಕಂಡಿದೆ. ಈ ಇಲಾಖೆಯಲ್ಲಿರುವವರು ಹೊರಗಿನಿಂದ ಸರ್ಕಾರಕ್ಕೆ ಸಲಹೆ, ಮಾರ್ಗದರ್ಶನವನ್ನು ನೀಡುತ್ತಾರೆ. ಅಮೆರಿಕದಲ್ಲಿ ದೊಡ್ಡ ಪ್ರಮಾಣದಲ್ಲಿ ಸುಧಾರಣೆಯನ್ನು ತರಲು ಪ್ರಮುಖ ಪಾತ್ರವಹಿಸುತ್ತಾರೆ. ಎಲಾನ್ ಮತ್ತು ವಿವೇಕ್ ಈ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದನ್ನು ನೋಡಲು ಎದುರು ನೋಡುತ್ತಿದ್ದೇನೆ’ ಎಂದು ಟಂಪ್ ಹೇಳಿದ್ದಾರೆ.
‘ನಮ್ಮ ಆರ್ಥಿಕತೆಯ ಹೊರೆಯನ್ನು ಕಡಿಮೆ ಮಾಡಿ, ‘ಅಮೆರಿಕ ಜನರಿಗಾಗಿ ನಾವು’ ಎನ್ನುವುದನ್ನು ಸಾಬೀತು ಮಾಡುತ್ತಾರೆ ಎನ್ನುವ ನಂಬಿಕೆಯಿದೆ. ಅಮೆರಿಕಕ್ಕೆ ಸ್ವಾತಂತ್ರ್ಯ ದೊರಕಿದ 250ನೇ ವಾರ್ಷಿಕೋತ್ಸವದಂದು ಜನತೆಗೆ ಈ ಇಬ್ಬರು ಉಡುಗೊರೆಯನ್ನು ನೀಡುವಲ್ಲಿ ಯಶಸ್ವಿಯಾಗುತ್ತಾರೆ ಎನ್ನುವ ಭರವಸೆಯಿದೆ’ ಎಂದು ಟ್ರಂಪ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
ಪೋಸ್ಟ್ ಹಾಕಿದ ಮಸ್ಕ್:
ಟ್ರಂಪ್ ಸರ್ಕಾರದಲ್ಲಿ ಮಸ್ಕ್ ಕೆಲಸ ಮಾಡುವ ಇಲಾಖೆಯ ಶಾರ್ಟ್ ಫಾರ್ಮ್ DOGE ಆಗಿರುತ್ತದೆ. ಮಸ್ಕ್ ಮತ್ತು ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಇಂಟರ್ನೆಟ್ ಮೆಮೆ. ಹೆಸರನ್ನು ಘೋಷಿಸಿದ ನಂತರ ಮಸ್ಕ್ ಅವರ ಪ್ರತಿಕ್ರಿಯೆ ಬಂದಿದೆ. ಅವರು ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದಿದ್ದು, ‘ಪ್ರಜಾಪ್ರಭುತ್ವಕ್ಕೆ ಬೆದರಿಕೆಯೇ? ಇಲ್ಲ, ಇದು ಅಧಿಕಾರಶಾಹಿಗೆ ಬೆದರಿಕೆ!!!’ ಎಂದಿದ್ದಾರೆ. ಈ ಮಧ್ಯೆ, ಫೆಡರಲ್ ಏಜೆನ್ಸಿಗಳಲ್ಲಿ ದೊಡ್ಡ ಪ್ರಮಾಣದ ವಜಾಗೊಳಿಸುವಿಕೆಗೆ ರಾಮಸ್ವಾಮಿ ಕರೆ ನೀಡಿದ್ದಾರೆ.
Leave a Comment