ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ, ಖಂಡನೆ: ಮೋದಿ ಸರ್ಕಾರಕ್ಕೆ ಮೋಹನ್ ಭಾಗವತ್ ದೊಡ್ಡ ಸಂದೇಶ
ನ್ಯೂಸ್ ಆ್ಯರೋ: ವಿಜಯದಶಮಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಮಹಾರಾಷ್ಟ್ರದ ನಾಗಪುರದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಪದ್ಮಭೂಷಣ ಹಾಗೂ ಇಸ್ರೋ ಮಾಜಿ ಮುಖ್ಯಸ್ಥ ಕೆ.ರಾಧಾಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಇಸ್ರೋ ಮಾಜಿ ಮುಖ್ಯಸ್ಥ ಕೆ. ಶಿವನ್ ಭಾಗವಹಿಸಿದ್ದರು. ಈ ಸಮಯದಲ್ಲಿ ಮೋಹನ್ ಭಾಗವತ್ ಬಾಂಗ್ಲಾದೇಶಿ ಹಿಂದೂಗಳಿಗೆ ಸಹಾಯ ಮಾಡುವಂತೆ ಭಾರತ ಸರ್ಕಾರವನ್ನು ಕೇಳಿಕೊಂಡಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ಮಾತನಾಡಿದ ಮೋಹನ್ ಭಾಗವತ್, ಬಾಂಗ್ಲಾದೇಶದಲ್ಲಿ ಸ್ಥಳೀಯ ಕಾರಣಗಳಿಂದ ಹಿಂಸಾತ್ಮಕ ದಂಗೆ ನಡೆಯಿತು. ಮತ್ತೊಮ್ಮೆ ಹಿಂದೂ ಸಮಾಜದ ಮೇಲೆ ದೌರ್ಜನ್ಯ ನಡೆದಿದೆ. ಅಲ್ಲಿನ ಹಿಂದೂಗಳು ಆ ದೌರ್ಜನ್ಯವನ್ನು ವಿರೋಧಿಸಿದರು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಮಾಜ ಮುಂದಾಯಿತು. ಆದ್ದರಿಂದ ಸ್ವಲ್ಪ ರಕ್ಷಣೆ ಇತ್ತು. ಈ ದಬ್ಬಾಳಿಕೆಯು ಮೂಲಭೂತವಾದಿ ಸ್ವಭಾವ. ಅಲ್ಲಿನ ಎಲ್ಲಾ ಅಲ್ಪಸಂಖ್ಯಾತ ಸಮುದಾಯಗಳ ತಲೆಯ ಮೇಲೆ ಕತ್ತಿ ನೇತಾಡುತ್ತಲೇ ಇರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ನುಸುಳುವಿಕೆ ಕೂಡ ಹೆಚ್ಚುತ್ತಿದೆ. ಈ ನುಸುಳುವಿಕೆಯಿಂದಾಗಿ ಪರಸ್ಪರ ಸಾಮರಸ್ಯ ಮತ್ತು ದೇಶದ ಭದ್ರತೆಯ ಬಗ್ಗೆ ಪ್ರಶ್ನೆ ಉದ್ಭವಿಸುತ್ತದೆ. ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯಕ್ಕೆ ಉದಾರತೆ, ಮಾನವೀಯತೆ ಮತ್ತು ಸದ್ಭಾವನೆ ತೋರುವುದು ಅಗತ್ಯವಾಗಿದೆ. ವಿಶೇಷವಾಗಿ ಭಾರತ ಸರ್ಕಾರ ಮತ್ತು ಪ್ರಪಂಚದಲ್ಲಿರುವ ಹಿಂದೂಗಳು ಆ ಕೆಲಸವನ್ನು ಮಾಡಬೇಕು. ಅಸಂಘಟಿತರಾಗಿ ಮತ್ತು ದುರ್ಬಲರಾಗಿ ಉಳಿಯುವುದು ದುಷ್ಟರ ದುಷ್ಕೃತ್ಯಗಳಿಗೆ ಆಹ್ವಾನವಾಗಿದೆ. ಈ ಪಾಠವನ್ನು ಹಿಂದೂ ಸಮುದಾಯ ಕಲಿಯಬೇಕು ಎಂದಿದ್ದಾರೆ.
Leave a Comment