16ನೇ ಬ್ರಿಕ್ಸ್ ಶೃಂಗಸಭೆ; ರಷ್ಯಾಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ
ನ್ಯೂಸ್ ಆ್ಯರೋ: 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಷ್ಯಾಕ್ಕೆ ತೆರಳಿದ್ದಾರೆ.
ರಷ್ಯಾದ ಕಜಾನ ನಗರದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನೇತೃತ್ವದಲ್ಲಿ ‘ಬ್ರಿಕ್ಸ್’ ಶೃಂಗಸಭೆ ನಡೆಯಲಿದೆ. ಈ ಸಮಾವೇಶದಲ್ಲಿ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್, ಭಾರತದ ಪ್ರಧಾನಿ ನರೇಂದ್ರ ಮೋದಿ, ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೋಗನ್, ಇರಾನ್‌ನ ಅಧ್ಯಕ್ಷ ಡಾ.ಮಸೂದ್ ಪೆಜೆಶ್ಕಿಯಾನ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ.
‘ನಾನು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾದ ಕಜಾನಗೆ ಹೊರಟಿದ್ದೇನೆ. ಭಾರತವು ‘ಬ್ರಿಕ್ಸ್’ಗೆ ಅಪಾರ ಪ್ರಾಮುಖ್ಯತೆಯನ್ನು ನೀಡುತ್ತದೆ. ನಾನು ಪ್ರಮುಖ ವಿಷಯಗಳ ಕುರಿತು ವ್ಯಾಪಕವಾದ ಚರ್ಚೆಗಳನ್ನು ಎದುರು ನೋಡುತ್ತಿದ್ದೇನೆ. ಜತೆಗೆ, ವಿವಿಧ ದೇಶಗಳ ನಾಯಕರನ್ನು ಭೇಟಿ ಮಾಡಲು ಬಯಸಿದ್ದೇನೆ’ ಎಂದು ಮೋದಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಭಾರತವು ಜಾಗತಿಕ ಅಭಿವೃದ್ಧಿ ಕಾರ್ಯಸೂಚಿ, ಸುಧಾರಿತ ಬಹುಪಕ್ಷೀಯತೆ, ಹವಾಮಾನ ಬದಲಾವಣೆ, ಆರ್ಥಿಕ ಸಹಕಾರ ವಿಷಯಗಳ ಕುರಿತು ಸಂವಾದ ಮತ್ತು ಚರ್ಚೆಗೆ ಪ್ರಮುಖ ವೇದಿಕೆಯಾಗಿ ಹೊರಹೊಮ್ಮಿರುವ ‘ಬ್ರಿಕ್ಸ್’ನೊಳಗಿನ ನಿಕಟ ಸಹಕಾರವನ್ನು ಗೌರವಿಸುತ್ತದೆ’ ಎಂದು ಮೋದಿ ಹೇಳಿದ್ದಾರೆ.
‘ಕಳೆದ ವರ್ಷ ಹೊಸ ಸದಸ್ಯರ ಸೇರ್ಪಡೆಯೊಂದಿಗೆ ‘ಬ್ರಿಕ್ಸ್’ನ ವಿಸ್ತರಣೆಯು ಜಾಗತಿಕ ಒಳಿತಿಗಾಗಿ ಅದರ ಒಳಗೊಳ್ಳುವಿಕೆ ಮತ್ತು ಕಾರ್ಯಸೂಚಿಯನ್ನು ಹೆಚ್ಚಿಸಿದೆ. ಇದೀಗ ‘ಬ್ರಿಕ್ಸ್’ ಶೃಂಗಸಭೆಯು ವಿಶೇಷ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲಿದೆ’ ಎಂದು ತಿಳಿಸಿದ್ದಾರೆ.
ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿರುದ್ಧ ಅಂತರರಾಷ್ಟ್ರೀಯ ಬಂಧನ ವಾರಂಟ್ ಜಾರಿಯಾಗಿದೆ. ಈ ಸಂದರ್ಭದಲ್ಲಿ ತಮ್ಮ ಬೆಂಬಲ ಹೆಚ್ಚಿಸಿಕೊಳ್ಳಲು ಪುಟಿನ್ ಶೃಂಗಸಭೆ ಆಯೋಜಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
Leave a Comment