ಇಂದಿನಿಂದ ಸರ್ಕಾರಿ ಕಚೇರಿಯಲ್ಲಿ ಮರಾಠಿ ಭಾಷೆ ಕಡ್ಡಾಯ; ತಪ್ಪಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ, ಏನು ಗೊತ್ತಾ?

ನ್ಯೂಸ್ ಆ್ಯರೋ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರ ಐತಿಹಾಸಿಕ ನಿರ್ಧಾರ ಘೋಷಣೆ ಮಾಡಿದೆ. ಇಂದಿನಿಂದ ಮಹಾರಾಷ್ಟ್ರದ ಸರ್ಕಾರಿ ಕಚೇರಿಯಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡುವುದು ಕಡ್ಡಾಯವಾಗಿದೆ. ಈ ಬಗ್ಗೆ ಮಹತ್ವದ ನಿರ್ಣಯವನ್ನು ರಾಜ್ಯ ಸರ್ಕಾರ ಅಂಗೀಕಾರ ಮಾಡಿದೆ.
ಮಾತೃ ಭಾಷೆ ಮರಾಠಿಯಲ್ಲೇ ಮಾತನಾಡಬೇಕು. ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳಲ್ಲೂ ಮರಾಠಿ ಭಾಷೆಯನ್ನೇ ಕಡ್ಡಾಯ ಬಳಸಬೇಕು ಅನ್ನೋ ಅಧಿಸೂಚನೆಯನ್ನು ಹೊರಡಿಸಲಾಗಿದೆ. ಈ ಆದೇಶದ ಪ್ರಕಾರ ಇನ್ಮುಂದೆ ಮಹಾರಾಷ್ಟ್ರದ ಎಲ್ಲಾ ಸರ್ಕಾರಿ ಕಚೇರಿಯ ಪ್ರತಿಯೊಬ್ಬ ಸಿಬ್ಬಂದಿಯೂ ಮರಾಠಿ ಭಾಷೆಯಲ್ಲೇ ಮಾತನಾಡಬೇಕು.
ಸರ್ಕಾರಿ ಕಚೇರಿಯಲ್ಲಿ ಮರಾಠಿ ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರ ಅತಿಥಿಗಳಿಗೆ ಮಾತ್ರ ವಿನಾಯಿತಿ ನೀಡಿದೆ. ಬೇರೆ ರಾಜ್ಯದ ಭಾರತೀಯರು ಅಥವಾ ವಿದೇಶಿಗರು ಅನ್ಯ ಭಾಷೆಯಲ್ಲಿ ಮಾತನಾಡಬಹುದಾಗಿದೆ.
ಒಂದು ವೇಳೆ ಸರ್ಕಾರಿ ಕಚೇರಿಯ ಸಿಬ್ಬಂದಿ ಮರಾಠಿ ಬಿಟ್ಟು ಬೇರೆ ಭಾಷೆಯಲ್ಲಿ ವ್ಯವಹರಿಸಿದರೆ ಅದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ. ಯಾವುದೇ ಸರ್ಕಾರಿ ಅಧಿಕಾರಿ ಆದರೂ ಅವರ ಮೇಲೆ ದೂರು ದಾಖಲಾಗುತ್ತದೆ. ಮೇಲುಸ್ತುವಾರಿಗಳು ಮರಾಠಿ ಬಿಟ್ಟು ಅನ್ಯ ಭಾಷೆಯಲ್ಲಿ ಮಾತನಾಡುವವರಿಗೆ ದಂಡ ವಿಧಿಸಲು ಈ ಕಾನೂನಿನಲ್ಲಿ ಅವಕಾಶ ನೀಡಲಾಗಿದೆ. ಮಹಾರಾಷ್ಟ್ರ ಶಾಸಕಾಂಗದ ಮರಾಠಿ ಭಾಷಾ ಸಮಿತಿ ಈ ಬಗ್ಗೆ ನಿಯಮಾವಳಿಯನ್ನು ರೂಪಿಸಿದೆ.
ಮಹಾರಾಷ್ಟ್ರ ಸರ್ಕಾರದ ಈ ನಿಯಮದಿಂದ ಇನ್ಮುಂದೆ ರಾಜ್ಯದ ಎಲ್ಲಾ ಸರ್ಕಾರಿ ನೌಕರರು ಮರಾಠಿ ಭಾಷೆಯನ್ನೇ ಮಾತನಾಡುವುದು ಕಡ್ಡಾಯವಾಗಿದೆ.
Leave a Comment