Mangalore : ಕಟ್ಟಡ ಕಾಮಗಾರಿ ವೇಳೆ ಭೂಕುಸಿತ ಪ್ರಕರಣ – ಒಬ್ಬ ಕಾರ್ಮಿಕ ರಕ್ಷಣೆ, ಮತ್ತೊಬ್ಬ ಸಾವು : ಕಟ್ಟಡ ಕಾಮಗಾರಿಗಳಿಗೆ ತಡೆ ನೀಡಿದ ಮಹಾನಗರಪಾಲಿಕೆ
ನ್ಯೂಸ್ ಆ್ಯರೋ : ಮಂಗಳೂರಿನ ಬಲ್ಮಠದಲ್ಲಿ ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿದ ಘಟನೆ ಇಂದು ನಡೆದಿದ್ದು, ಈ ಘಟನೆಯಲ್ಲಿ ಇಬ್ಬರು ಮಣ್ಣಿನಡಿ ಸಿಲುಕಿದ್ದರು. ಆ ಪೈಕಿ ಓರ್ವ ಕಾರ್ಮಿಕನನ್ನು ರಕ್ಷಿಸಲಾಗಿದ್ದು, ಮತ್ತೊಬ್ಬ ಕಾರ್ಮಿಕ ಪ್ರಾಣ ಕಳೆದುಕೊಂಡಿದ್ದಾನೆ.
ಘಟನೆಯ ಬಳಿಕ ಸತತ 7 ಗಂಟೆ ಕಾರ್ಯಾಚರಣೆ ನಡೆಸಲಾಯಿತಾದರೂ ಕಾರ್ಮಿಕನ ಪ್ರಾಣ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಉತ್ತರ ಪ್ರದೇಶ ಮೂಲದ ಚಂದನ್ ಕುಮಾರ್ (30) ಮೃತ ದುರ್ದೈವಿ.
ಏನಿದು ಘಟನೆ?
ಬಲ್ಮಠದ ಕಮರ್ಷಿಯಲ್ ಆಂಡ್ ಫುಲ್ಲಿ 3 ಫರ್ನಿಷ್ ಸ್ಟುಡಿಯೊ ಅಪಾರ್ಟೆಂಟ್ಸ್ ಕಟ್ಟಡದ ತಳಪಾಯದ ಪಿಲ್ಲರ್ ಪಕ್ಕದಲ್ಲಿ ಕಾಂಕ್ರೀಟ್ ತಡೆಗೋಡೆ ನಿರ್ಮಿಸುವ ಕೆಲಸ ನಡೆಯುತ್ತಿತ್ತು. ಇಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಅದರಡಿ ಸಿಲುಕಿದ್ದರು.
ಕೂಡಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ರಕ್ಷಣಾ ಕಾರ್ಯಚರಣೆ ಆರಂಭಿಸಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳ, ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ ತಂಡ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ನಡೆಸಲು ಆರಂಭಿಸಿದ್ದಾರೆ. ಇದಾದ ಕೆಲವು ಗಂಟೆಗಳ ಬಳಿಕ ಓರ್ವ ಕಾರ್ಮಿಕನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಂದನ್ ಕುಮಾರ್ ರಕ್ಷಣೆ ಸಾಧ್ಯವಾಗಿಲ್ಲ.
ರಿಟೇನಿಂಗ್ ವಾಲ್ ಮತ್ತು ಶೀಟ್ ಗಳ ಮಧ್ಯೆ ಸಿಲುಕಿದ್ದ ಕಾರ್ಮಿಕನ ರಕ್ಷಣೆಗಾಗಿ ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿದರೂ ಕಾರ್ಮಿಕನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಸುಮಾರು ಏಳು ಗಂಟೆಯ ವೇಳೆಗೆ ಮೃತದೇಹವನ್ನು ಎನ್ ಡಿ ಆರ್ ಎಫ್ ತಂಡ ಹೊರತೆಗೆದಿದೆ.
ಕಟ್ಟಡ ಕಾಮಗಾರಿಗಳಿಗೆ ತಡೆ..!!
ಬಲ್ಮಠದ ಅವಘಡ ಸಂಭವಿಸಿದ ಬೆನ್ನಲ್ಲೇ ಕಟ್ಟಡ ಕಾಮಗಾರಿಗಳಿಗೆ ತಾತ್ಕಾಲಿಕ ತಡೆ ನೀಡಿ ಮಂಗಳೂರು ಮಹಾನಗರ ಪಾಲಿಕೆ ಆದೇಶ ನೀಡಿದ್ದು, ಮಳೆಗಾಲದಲ್ಲಿ ಕಟ್ಟಡ ಕಾಮಗಾರಿಗಳಿಗೆ ಅವಕಾಶ ನಿರಾಕರಿಸಿದೆ.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಪರವಾನಿಗೆ ಪಡೆದಂತಹ ಕಟ್ಟಡ ನಿರ್ಮಾಣದಾರರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಅವೈಜ್ಞಾನಿಕವಾಗಿ ಭೂ ಅಗೆತ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿ ಮಾಡುತ್ತಿರುವುದರಿಂದ ಭೂ ಕುಸಿತ ಉಂಟಾಗಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಸಾಕಷ್ಟು ಹಾನಿಯುಂಟಾಗುತ್ತಿರುವ ಪ್ರಕರಣಗಳು ಕಂಡುಬಂದಿದ್ದು ಹಾಗೂ ಜೀವಹಾನಿಯೂ ಸಂಭವಿಸಿರುತ್ತದೆ.
ಈ ನಿಟ್ಟಿನಲ್ಲಿ ಪ್ರಸ್ತುತ ಮುಂಗಾರಿಗೆ ಅತ್ಯಧಿಕ ಮಳೆಯಾಗುವ ಸಾಧ್ಯತೆಗಳೊಂದಿಗೆ ರೆಡ್, ಅರೆಂಜ್, ಎಲ್ಲೊ ಅಲರ್ಟ್ ಬಗ್ಗೆ ಹವಾಮಾನ ಇಲಾಖೆಯಿಂದ ನಿರಂತರವಾಗಿ ಮುನ್ಸೂಚನೆ ನೀಡುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ಕಟ್ಟಡದ ಕಾಮಗಾರಿಯನ್ನು ಮಳೆಗಾಲ ಮುಕ್ತಾಯವಾಗುವವರೆಗೆ ನಡೆಸದಂತೆ ಹಾಗೂ ಈಗಾಗಲೇ ಪ್ರಾರಂಭಿಸಿರುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ಅಗತ್ಯ ಮುನ್ನೆಚ್ಚರಿಕೆ ಕ್ರಮವನ್ನು ಅಳವಡಿಸಿಕೊಂಡು ಕಾಮಗಾರಿಯನ್ನು ನಿಲ್ಲಿಸುವಂತೆ ಈ ಮೂಲಕ ತಿಳಿಯಪಡಿಸಿದೆ. ಈ ಬಗ್ಗೆ ಯಾವುದೇ ಉಲ್ಲಂಘನೆ ಕಂಡುಬಂದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಸಂಬಂಧಪಟ್ಟವರ ವಿರುದ್ಧ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
Leave a Comment