ಹೊಸ ಗ್ಯಾಂಗ್‌ಸ್ಟರ್ ಈ ಲಾರೆನ್ಸ್ ಬಿಷ್ಣೋಯಿ; ಸಲ್ಮಾನ್ ಖಾನ್ ಏಕೆ ಇವನ ಟಾರ್ಗೆಟ್?
ನ್ಯೂಸ್ ಆ್ಯರೋ: ಎನ್ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಯಲ್ಲಿ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರು ಬೆಳಕಿಗೆ ಬರುತ್ತಿದೆ. ಇದರ ಬೆನ್ನಲ್ಲೇ ಒಂದು ವಿಷಯ ಮುಂಬೈ ಮಾತ್ರವಲ್ಲದೆ ದೇಶಾದ್ಯಂತ ಪೊಲೀಸರನ್ನು ಕಾಡುತ್ತಿದೆ. ಲಾರೆನ್ಸ್ ಬಿಷ್ಣೋಯ್ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಗಲು ಬಯಸುತ್ತಾನೆಯೇ? ಏಕೆಂದರೆ ಡಿ ಗ್ಯಾಂಗ್ ಮಾಡಲಾಗದ ಕೆಲಸವನ್ನು ಲಾರೆನ್ಸ್ ಬಿಷ್ಣೋಯ್ ಅವರ ಎಲ್ ಗ್ಯಾಂಗ್ ಮಾಡುತ್ತಿದೆ.
ಪಂಜಾಬ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಸಿಧು ಮೂಸೆವಾಲಾನನ್ನು ಕೊಲ್ಲಿಸಿದನು. ದೆಹಲಿಯಲ್ಲಿ ಅವನ ಹಿಂಬಾಲಕರು ಅನೇಕ ಕೊಲೆಗಳನ್ನು ಮಾಡಿದರು. ಅವರ ಹೆಸರು ಯುಪಿಯಿಂದ ಮಹಾರಾಷ್ಟ್ರದವರೆಗೆ ಕುಖ್ಯಾತಿ ಗಳಿಸುತ್ತಲೇ ಇದೆ.
ಗ್ಯಾಂಗ್‌ಸ್ಟರ್ ಭಯೋತ್ಪಾದನೆ ಪ್ರಕರಣದಲ್ಲಿ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ವಿರುದ್ಧ ಎನ್‌ಐಎ ಚಾರ್ಜ್ ಶೀಟ್ ಸಲ್ಲಿಸಿದೆ. ದಾವೂದ್ ಇಬ್ರಾಹಿಂ 90 ರ ದಶಕದಲ್ಲಿ ಗ್ಯಾಂಗ್ ಸ್ಥಾಪಿಸಿದಂತೆಯೇ, ಲಾರೆನ್ಸ್ ಬಿಷ್ಣೋಯ್ ಕೂಡ ಹತ್ಯೆ ಮತ್ತು ಸುಲಿಗೆ ದಂಧೆಯ ಮೂಲಕ ಸಾಮ್ರಾಜ್ಯವನ್ನು ನಿರ್ಮಿಸುತ್ತಿದ್ದಾನೆ ಎಂಬುವುದು ಇದರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಬಿಷ್ಣೋಯಿ 700 ಕ್ಕೂ ಹೆಚ್ಚು ಶೂಟರ್‌ಗಳನ್ನು ಹೊಂದಿದ್ದಾನೆ.
ಅವರಲ್ಲಿ ಹಲವರು ಅಪ್ರಾಪ್ತರು. ಲಾರೆನ್ಸ್ ಹವಾ 11 ರಾಜ್ಯಗಳು ಮತ್ತು 6 ದೇಶಗಳಲ್ಲಿ ಹರಡಿದೆ. ಅವನನ್ನು ಪಂಜಾಬ್‌ನ ಅತಿದೊಡ್ಡ ಶೂಟರ್ ಎಂದು ಹೇಳಲಾಗುತ್ತದೆ. ಕಳೆದ ವರ್ಷ ಡಿಸೆಂಬರ್ ಅಂತ್ಯದಲ್ಲಿ, ದೇಶದ ಹೊಸ ಡಾನ್ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಎನ್‌ಐಎ ಮುಂದೆ ತಪ್ಪೊಪ್ಪಿಗೆಯನ್ನು ನೀಡಿದ್ದನು. ಕಾಲೇಜು ರಾಜಕೀಯದಿಂದ ಅಪರಾಧ ಜಗತ್ತಿಗೆ ಹೇಗೆ ಬಂದೆ ಎಂಬುದನ್ನು ಇದರಲ್ಲಿ ಅವನೇ ಹೇಳಿಕೊಂಡಿದ್ದಾನೆ.
ಇನ್ನು ಲಾರೆನ್ಸ್ ಅವರ ಟಾಪ್-10 ಟಾರ್ಗೆಟ್ ಪಟ್ಟಿಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಮೊದಲ ಸ್ಥಾನದಲ್ಲಿದ್ದಾರೆ. ಲಾರೆನ್ಸ್ ಬಿಷ್ಣೋಯ್ , ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಬಯಸುತ್ತಾನೆ ಎಂದು ಖಾಸಗಿ ಸಂಭಾಷಣೆಯಲ್ಲಿ, ಲಾರೆನ್ಸ್ ಶೂಟರ್ ರೋಹಿತ್ ಗೋಡಾರಾ ಅವರು ಸಲ್ಮಾನ್ ಖಾನ್ ಅವರ ಎಲ್ಲಾ ಸ್ನೇಹಿತರು ಮತ್ತು ಆಪ್ತರು ಲಾರೆನ್ಸ್ ಬಿಷ್ಣೋಯ್ ಅವರ ಟಾರ್ಗೆಟ್ನಲ್ಲಿದ್ದಾರೆ ಎಂದು ತಪ್ಪೊಪ್ಪಿಕೊಂಡಿದ್ದಾನೆ.
ಕೆಲ ತಿಂಗಳ ಹಿಂದೆ ಸಲ್ಮಾನ್ ಮನೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಲಾರೆನ್ಸ್ ಬಿಷ್ಣೋಯ್ ಪ್ರಕಾರ, 1998 ರಲ್ಲಿ, ಸಲ್ಮಾನ್ ಖಾನ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಜೋಧ್‌ಪುರದಲ್ಲಿ ಕೃಷ್ಣ ಜಿಂಕೆಯನ್ನು ಬೇಟೆಯಾಡಿದ್ದರು. ಕೃಷ್ಣ ಜಿಂಕೆಯನ್ನು ಬಿಷ್ಣೋಯ್ ಸಮುದಾಯದವರು ಪೂಜಿಸುತ್ತಾರೆ ಮತ್ತು ಇದೇ ಕಾರಣಕ್ಕಾಗಿ ಲಾರೆನ್ಸ್ ಬಿಷ್ಣೋಯ್ ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಬಯಸುತ್ತಾನೆ. ಇದಕ್ಕಾಗಿ ಲಾರೆನ್ಸ್ ತನ್ನ ಆತ್ಮೀಯ ಸ್ನೇಹಿತ ಸಂಪತ್ ನೆಹ್ರಾನನ್ನು ಮುಂಬೈಗೆ ಕಳುಹಿಸಿದ್ದರು, ಆದರೆ ಸಂಪತ್ ನನ್ನು ಹರಿಯಾಣ ಎಸ್‌ಟಿಎಫ್ ಬಂಧಿಸಿದೆ. ಹಾಗಾಗಿ ಸಲ್ಮಾನ್ ಖಾನ್ ಮಿಸ್ ಆಗಿದ್ದಾರೆ ಎಂದು ಹೇಳಲಾಗ್ತಿದೆ.
ಇನ್ನು ಮಹಾರಾಷ್ಟ್ರ ಮಾಜಿ ಸಚಿವ ಬಾಬಾ ಸಿದ್ದಿಕಿ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಹೊತ್ತುಕೊಂಡಿದೆ. ಮಾತ್ರವಲ್ಲದೇ ನಟ ಸಲ್ಮಾನ್ ಖಾನ್‌ಗೆ ಸಹಾಯ ಮಾಡುವವರಿಗೂ ಜೀವ ಬೆದರಿಕೆ ಹಾಕಿದ್ದಾರೆ. ಮಹಾರಾಷ್ಟ್ರದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿರುವ ಸಿದ್ದಿಕಿ ಹತ್ಯೆಯಲ್ಲಿ ಭಾಗಿಯಾದ ಮೂವರು ಶೂಟರ್‌ಗಳು ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ಗೆ ಸೇರಿದವರಾಗಿದ್ದೆಂದು ಹೇಳಲಾಗಿದೆ. ಪೊಲೀಸರು ಕರ್ನೇಲ್ ಬಲ್‌ಜೀತ್ ಸಿಂಗ್ ಹಾಗೂ ಧರಮ್‌ರಾಜ್ ಕಶ್ಯಪ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಅದರಲ್ಲಿ ಒಬ್ಬನನ್ನು ನ್ಯಾಯಾಲಯವು ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
Leave a Comment