ಮುಂಬೈ-ನ್ಯೂಯಾರ್ಕ್ ಏರ್ ಇಂಡಿಯಾಕ್ಕೆ ಬಾಂಬ್ ಬೆದರಿಕೆ: ಟಿಶ್ಯೂ ಪೇಪರ್‌ನಲ್ಲಿತ್ತು ಶಾಕಿಂಗ್ ಸಂದೇಶ !
ನ್ಯೂಸ್ ಆ್ಯರೋ: ಮುಂಬೈನಿಂದ ನ್ಯೂಯಾರ್ಕ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಹೀಗಾಗಿ ಮುಂಬೈನಿಂದ ನ್ಯೂಯಾರ್ಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವನ್ನು ಭದ್ರತಾ ಕಾರಣದಿಂದ ಸೋಮವಾರ ಬೆಳಿಗ್ಗೆ ಹೊಸದಿಲ್ಲಿ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಗಿದೆ. 239 ಪ್ರಯಾಣಿಕರಿದ್ದ ವಿಮಾನವನ್ನು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಐಜಿಐ) ತುರ್ತು ಭೂಸ್ಪರ್ಶ ಮಾಡಲಾಯಿತು. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
ವಿಮಾನವು ನಸುಕಿನ 2 ಗಂಟೆ ಸುಮಾರಿಗೆ ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನ್ಯೂಯಾರ್ಕ್ ಕಡೆ ಪ್ರಯಾಣಿಸಲು ಟೇಕ್ ಆಫ್ ಆಗಿತ್ತು. ಅದಾಗಿ ಕೆಲವೇ ಹೊತ್ತಿನಲ್ಲಿ ಬಾಂಬೆ ಬೆದರಿಕೆ ಟ್ವೀಟ್ ಬಂದಿತ್ತು. ಕೂಡಲೇ ವಿಮಾನದ ಕ್ಯಾಪ್ಟನ್‌ಗೆ ಮಾಹಿತಿ ನೀಡಲಾಯಿತು. ಸರ್ಕಾರದ ಭದ್ರತಾ ನಿಯಂತ್ರಣ ಸಮಿತಿ ಸೂಚನೆಯಂತೆ ದಿಲ್ಲಿಯತ್ತ ವಿಮಾನವನ್ನು ತಿರುಗಿಸಲಾಯಿತು.
“ಮುಂಬಯಿಯಿಂದ ಜೆಎಫ್‌ಕೆ ನಡುವೆ ಕಾರ್ಯ ನಿರ್ವಹಿಸುತ್ತಿರುವ ಎಐ 119 ವಿಮಾನವು ಅಕ್ಟೋಬರ್ 14ರಂದು ನಿರ್ದಿಷ್ಟ ಭದ್ರತಾ ಎಚ್ಚರಿಕೆ ಸ್ವೀಕರಿಸಿದ್ದು, ಅದನ್ನು ದಿಲ್ಲಿಗೆ ತಿರುಗಿಸಲಾಗಿದೆ. ಎಲ್ಲ ಪ್ರಯಾಣಿಕರು ಇಳಿದಿದ್ದು, ದಿಲ್ಲಿ ವಿಮಾನ ನಿಲ್ದಾಣ ಟರ್ಮಿನಲ್‌ನಲ್ಲಿದ್ದಾರೆ. ಈ ಅನಿರೀಕ್ಷಿತ ಅಡ್ಡಿಯಿಂದ ನಮ್ಮ ಅತಿಥಿಗಳಿಗೆ ಉಂಟಾಗಿರುವ ಅನನುಕೂಲತೆಯನ್ನು ತಗ್ಗಿಸಲು ಏರ್‌ಪೋರ್ಟ್‌ನಲ್ಲಿನ ನಮ್ಮ ಸಹೋದ್ಯೋಗಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ” ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದೆ.
ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಯನ್ನು ಖಾತರಿಪಡಿಸಲು ಎಲ್ಲ ನಿರ್ದಿಷ್ಟ ಸುರಕ್ಷತಾ ಶಿಷ್ಟಾಚಾರಗಳನ್ನು ಅನುಸರಿಸಲಾಗುತ್ತಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 14 ರಂದು ಮುಂಬೈನಿಂದ JFK ಗೆ ಹಾರುವ AI119 ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಆಗಸ್ಟ್‌ನಲ್ಲಿ ಮುಂಬೈನಿಂದ ಬರುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ವಿಮಾನದ ಟಾಯ್ಲೆಟ್‌ನಲ್ಲಿ ಟಿಶ್ಯೂ ಪೇಪರ್‌ನಲ್ಲಿ ವಿಮಾನದಲ್ಲಿ ಬಾಂಬ್ ಇದೆ ಎಂಬ ಸಂದೇಶ ಬರೆದಿರುವುದು ಪತ್ತೆಯಾಗಿತ್ತು. ಅದರಲ್ಲಿ 135 ಪ್ರಯಾಣಿಕರಿದ್ದರು. ಇದಾದ ಬಳಿಕ ಪೈಲಟ್ ಎಟಿಸಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ತಿರುವನಂತಪುರಂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.
Leave a Comment