ಅ.3 ರಿಂದ ಮಂಗಳೂರು ದಸರಾ ವೈಭವ; ಡಿಜೆಗೆ ಬ್ರೇಕ್
ಮಂಗಳೂರು: ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವ ಅಕ್ಟೋಬರ್ 3 ರಿಂದ 14ವರೆಗೆ ನಡೆಯಲಿದೆ. ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಅಬ್ಬರದ ಸೌಂಡ್ಗೆ, ಡಿಜೆಗೆ ಬ್ರೇಕ್ ಹಾಕಲು ನಿರ್ಧರಿಸಲಾಗಿದೆ.
ಈ ಬಾರಿಯ ಮಂಗಳೂರು ದಸರಾ ಉದ್ಘಾಟನೆಯನ್ನು ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ನೆರವೇರಿಸಲಿದ್ದಾರೆ. ದಸರಾ ಅಂಗವಾಗಿ ಕುದ್ರೋಳಿ ಕ್ಷೇತ್ರದಲ್ಲಿ ನಿತ್ಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನದಾನ ಸೇವೆಗಳು ನಡೆಯಲಿದೆ. ಅ.3 ರಂದು ಬೆಳಗ್ಗೆ ನವದುರ್ಗೆಯರು ಮತ್ತು ಶಾರದಾ ಪ್ರತಿಷ್ಠೆ ನಡೆಯಲಿದೆ. ಅಂದಿನಿಂದ ಅ.14 ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಕ್ಷೇತ್ರದಲ್ಲಿ ನಡೆಯಲಿದೆ.
ಇನ್ನು ಈ ಬಾರಿ ವಿಶೇಷವಾಗಿ ಅ.6 ರಂದು ಬೆಳಗ್ಗೆ 5.30ಕ್ಕೆ ಹಾಫ್ ಮ್ಯಾರಾಥಾನ್ ನಡೆಯಲಿದೆ. ಇದರಲ್ಲಿ ದೇಶದ ವಿವಿಧ ಭಾಗಗಳಿಂದ 2 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಲಿದ್ದಾರೆ. ಅ.13 ರಂದು ಸಂಜೆ 4ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಮಂಗಳೂರು ದಸರಾ ಬೃಹತ್ ಶೋಭಾಯಾತ್ರೆ ಆರಂಭವಾಗಲಿದೆ. ಕೇರಳದ ಮೈ ನವಿರೇಳಿಸುವ ಚೆಂಡೆ ವಾದ್ಯ, ರಾಜ್ಯದ ನಾನಾ ಕಡೆಗಳಿಂದ ಆಗಮಿಸುವ ಜಾನಪದ, ಸಾಂಸ್ಕೃತಿಕ ಹಿನ್ನೆಲೆಯ ನೃತ್ಯ ತಂಡಗಳು, ಸ್ತಬ್ದ ಚಿತ್ರಗಳು ಭಾಗವಹಿಸಲಿದೆ.
ಮುಖ್ಯವಾಗಿ “ಈ ಬಾರಿಯ ದಸರಾ ಮೆರವಣಿಗೆಯಲ್ಲಿ ಡಿಜೆಗೆ ಅವಕಾಶ ನೀಡುವುದಿಲ್ಲ. ಪೊಲೀಸ್ ಇಲಾಖೆಯಿಂದಲೂ ಇದಕ್ಕೆ ಸೂಚನೆ ಇದೆ. ಶಬ್ದ ಮಾಲಿನ್ಯ ಆಗಬಾರದು. ಇದರಿಂದ ಯಾರಿಗೂ ತೊಂದರೆ ಆಗಬಾರದು ಎಂಬ ದೃಷ್ಟಿಯಿಂದ ಡಿಜೆಗೆ ಈ ಬಾರಿ ಅವಕಾಶ ಇಲ್ಲ. ಕರ್ನಾಟಕ ಹೈಕೋರ್ಟ್ ಮಡಿಕೇರಿ ದಸರಾಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪಿನಂತೆ ಸೌಂಡ್ ಸಿಸ್ಟಮ್ನಲ್ಲೂ ಕಡಿಮೆ ಶಬ್ದ ಬಳಸಲು ತೀರ್ಮಾನಿಸಲಾಗಿದೆ. ಅದರಂತೆ 6 ಸ್ಪೀಕರ್ ಮತ್ತು 6 ವೂಪರ್ಗಳನ್ನು ಮಾತ್ರ ಬಳಸಲು ಸೂಚಿಸಲಾಗಿದೆ ಎಂದು ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್ ಅವರು ತಿಳಿಸಿದ್ದಾರೆ.
Leave a Comment