ಕೋಲ್ಡ್ ಪ್ಲೇ: 2 ಸಾ.ಬೆಲೆಯ ಟಿಕೆಟ್ 3.5 ಲಕ್ಷಕ್ಕೆ ಮಾರಾಟ, ಬುಕ್ ಮೈ ಶೋ ಕ್ರ್ಯಾಶ್ !
ಕಳೆದೆರಡು ವಾರಗಳಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲೀಷ್ ಮಾಧ್ಯಮಗಳಲ್ಲಿ ಕೋಲ್ಡ್ಪ್ಲೇನದ್ದೇ ಚರ್ಚೆಯಾಗ್ತಿದೆ. ಏನಿದು ಕೋಲ್ಡ್ ಪ್ಲೇ? ಕೋಲ್ಡ್ ಪ್ಲೇ ಎಂಬುವುದು ಬ್ರಿಟನ್ ಮೂಲದ ವಿಶ್ವಜನಪ್ರಿಯ ಮ್ಯೂಸಿಕ್ ಬ್ಯಾಂಡ್.
ಇದೀಗ ಈ ಬ್ಯಾಂಡ್ನವರು ಭಾರತದಲ್ಲಿ ಲೈವ್ ಶೋ ಆಯೋಜನೆ ಮಾಡಿದ್ದಾರೆ. ಶೋನ ಟಿಕೆಟ್ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ. ಹಲವಾರು ಮಂದಿ ಶೋನ ಟಿಕೆಟ್ ಸಿಗದೇ ಇರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನು ಗಮನಿಸಿದ ಕೋಲ್ಡ್ ಪ್ಲೇ ಒಂದು ಶೋ ಅನ್ನು ಹೆಚ್ಚುವರಿಯಾಗಿ ಘೋಷಿಸಿ ಟಿಕೆಟ್ ಮಾರಾಟ ಮಾಡಿತಾದರೂ ಅದರ ಟಿಕೆಟ್ಗಳು ಸಹ ಕೆಲವೇ ನಿಮಿಷಗಳಲ್ಲಿ ಬಿಕರಿಯಾದವು.
ಆದರೆ ಆ ಟಿಕೆಟ್ಗಳನ್ನು ಕೆಲವು ಸಂಸ್ಥೆಗಳು ಭಾರಿ ಮೊತ್ತಕ್ಕೆ ಬ್ಲಾಕ್ನಲ್ಲಿ ಮಾರಾಟ ಮಾಡಲು ಆರಂಭಿಸಿವೆ. ಈ ಬ್ಲಾಕ್ ಮಾರಾಟ ದೊಡ್ಡದಾಗಿ ಸದ್ದಾಗುತ್ತಿದ್ದಂತೆ ಟಿಕೆಟ್ ಮಾರಾಟ ಮಾಡಿದ್ದ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮುಖ್ಯವಾಗಿ ಬುಕ್ಮೈ ಶೋ ಮತ್ತು ಲೈವ್ ನ್ಯಾಷನಲ್ ಎಂಟರ್ಟೈನ್ಮೆಂಟ್ ಸಂಸ್ಥೆಗಳು ಕೋಲ್ಡ್ ಪ್ಲೇ ಭಾರತದ ಕಾನ್ಸರ್ಟ್ನ ಟಿಕೆಟ್ ಅನ್ನು ಆನ್ಲೈನ್ ಮಾರಾಟ ಮಾಡಿದ್ದವು. ಆದರೆ ಈ ವೆಬ್ಸೈಟ್ಗಳಲ್ಲಿ ಕ್ಷಣದಲ್ಲಿ ಮಾರಾಟವಾದ ಟಿಕೆಟ್ಗಳು ಕೆಲವು ಬೇರೆ ವೆಬ್ಸೈಟ್ಗಳಲ್ಲಿ ಮತ್ತೆ ಮಾರಾಟಕ್ಕೆ ಸಿಕ್ಕವು ಅದೂ ಸುಮಾರು 20-30 ಪಟ್ಟು ಹೆಚ್ಚು ದರದಲ್ಲಿ. ಇದು ಕೋಲ್ಡ್ ಪ್ಲೇ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಇದೀಗ ವಕೀಲರೊಬ್ಬರು ಕೋಲ್ಡ್ ಪ್ಲೇ ಟಿಕೆಟ್ ಮಾರಾಟ ಹಗರಣದ ವಿಷಯವಾಗಿ ಆರ್ಥಿಕ ಅಪರಾಧ ವಿಭಾಗಕ್ಕೆ ಬುಕ್ ಮೈ ಶೋ ಮತ್ತು ಲೈವ್ ನ್ಯಾಷನಲ್ ಎಂಟರ್ಟೈನ್ಮೆಂಟ್ ಸಂಸ್ಥೆಗಳ ವಿರುದ್ಧ ದೂರು ದಾಖಲಿಸಿದ್ದು ಟಿಕೆಟ್ ಮಾರಾಟದಲ್ಲಿ ಈ ಸಂಸ್ಥೆಗಳು ಅವ್ಯಹಾರ ಎಸಗಿವೆ ಎಂದು ಆರೋಪ ಮಾಡಿದ್ದಾರೆ.
ಬುಕ್ ಮೈ ಶೋ, ಟಿಕೆಟ್ ಖರೀದಿಸಲು ಮುಂದಾಗಿರುವ ನಿಜ ಗ್ರಾಹಕರನ್ನು ನಿರ್ಲಕ್ಷಿಸಿ ತಪ್ಪು ದಾರಿಯಲ್ಲಿ ಬ್ರೋಕರ್ಗಳಿಗೆ ಹೆಚ್ಚಿನ ಟಿಕೆಟ್ ಮಾರಾಟ ಮಾಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕೋಲ್ಡ್ ಪ್ಲೇ ಭಾರತದ ಕಾನ್ಸರ್ಟ್ನ ಅಧಿಕೃತ ಟಿಕೆಟಿಂಗ್ ಪಾರ್ಟನರ್ ಆಗಿದೆ ಬುಕ್ ಮೈ ಶೋ. ಈ ಸಂಸ್ಥೆಯ ವೆಬ್ಸೈಟ್ನಿಂದ ಮಾರಾಟವಾದ ಟಿಕೆಟ್ಗಳನ್ನೇ ಬೇರೆ ಕೆಲ ವೆಬ್ಸೈಟ್ಗಳಲ್ಲಿ ಭಾರಿ ದುಬಾರಿ ಮೊತ್ತಕ್ಕೆ ಬ್ಲಾಕ್ನಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಕೋಲ್ಡ್ ಪ್ಲೇ ಮ್ಯೂಸಿಕ್ ಬ್ಯಾಂಡ್ ಮುಂದಿನ ವರ್ಷ ಜನವರಿ 18 ರಿಂದ 21 ರವರೆಗೆ ಮುಂಬೈನಲ್ಲಿ ಮೂರು ಶೋಗಳನ್ನು ಮಾಡಲಿದೆ. ಈ ಶೋಗೆ 2500 ರೂಪಾಯಿಗಳಿಂದ ಟಿಕೆಟ್ ದರ ಪ್ರಾರಂಭವಾಗಿತ್ತು. ಬುಕ್ ಮೈ ಶೋನಲ್ಲಿ ಹೆಚ್ಚಿನ ಬೆಲೆ ಎಂದರೆ ಸುಮಾರು 15 ರಿಂದ 20 ಸಾವಿರದ ವರೆಗೆ ಮಾತ್ರವೇ ಇತ್ತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡಿರುವ ಕೆಲವು ಬ್ರೋಕರ್ಗಳು ಬುಕ್ ಮೈ ಶೋನಿಂದ ದೊಡ್ಡ ಮೊತ್ತದಲ್ಲಿ ಟಿಕೆಟ್ ಖರೀದಿ ಮಾಡಿ ಆ ಟಿಕೆಟ್ಗಳನ್ನು ಈಗ ಒಂದಕ್ಕೆ 35-40 ಸಾವಿರ ರೂಪಾಯಿಗೆ ಮಾರಾಟ ಮಾಡುತ್ತಿವೆ. ಕೆಲವು ವಿಐಪಿ ಟಿಕೆಟ್ಗಳು 3.5 ಲಕ್ಷ ರೂಪಾಯಿಗೆ ಸಹ ಮಾರಾಟವಾಗಿವೆ.
ಹೀಗೆ ಬ್ಲಾಕ್ನಲ್ಲಿ ಕೋಲ್ಡ್ ಪ್ಲೇ ಕಾನ್ಸರ್ಟ್ನ ಟಿಕೆಟ್ ಮಾರಾಟ ಮಾಡುತ್ತಿರುವ ವಿಯಾಗೊಗೊ ಮತ್ತು ಇನ್ನಿತರೆ ವೆಬ್ ಸೈಟ್ಗಳ ವಿರುದ್ಧ ಬುಕ್ ಮೈ ಶೋ ಪ್ರತ್ಯೇಕ ದೂರು ದಾಖಲು ಮಾಡಿದೆ. ಆದರೆ ಈ ಪ್ರಕರಣವಾಗಿ ಪೊಲೀಸರು ಯಾವುದೇ ಕ್ರಮ ಇನ್ನೂ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ. ಕೋಲ್ಡ್ ಪ್ಲೇ ಕಾನ್ಸರ್ಟ್ನಂತೆಯೇ ಪಂಜಾಬಿ ಗಾಯಕ ನಟ ದಿಲ್ಜಿತ್ ದುಸ್ಸಾಂಜ್ರ ‘ದಿಲ್ಲುಮಿನಾಟಿ’ ಶೋನ ಟಿಕೆಟ್ಗಳು ಸಹ ಭಾರಿ ಮೊತ್ತಕ್ಕೆ ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ.
Leave a Comment