Mangalore : ಕಿರಿಯ ಪೋಲಿಸ್ ಅಧಿಕಾರಿಗಳಿಂದ ಲಂಚಕ್ಕೆ ಬೇಡಿಕೆ ಇಟ್ಟ KSRP ಇನ್ಸ್‌ಪೆಕ್ಟರ್ – ಲಂಚ ಸ್ವೀಕರಿಸುವಾಗಲೇ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಬಲೆಗೆ..!!
ನ್ಯೂಸ್ ಆ್ಯರೋ : ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಸರ್ಕಾರಿ ಸೇವೆಯಲ್ಲಿ ದುಡಿಯುವ ಕಿರಿಯರ ಮೇಲೆ ಹಿರಿಯರ ದರ್ಪ, ದೌರ್ಜನ್ಯ ಸಾಮಾನ್ಯವಾಗಿದ್ದರೂ ಲಂಚದ ಬೇಡಿಕೆ ಬಲು ಅಪರೂಪ. ಆದರೆ ಇಲ್ಲೊಬ್ಬ ಖತರ್ನಾಕ್ ಅಧಿಕಾರಿಯೊಬ್ಬ ತನಗಿಂತ ಕಿರಿಯ ಅಧಿಕಾರಿಗಳಿಂದ ಲಂಚ ಸ್ವೀಕರಿಸುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ಕಿರಿಯ ಪೊಲೀಸ್ ಅಧಿಕಾರಿಗಳಿಂದ ಲಂಚ ಸ್ವೀಕರಿಸುತ್ತಿದ್ದ ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ಪಡೆಯ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿಯಲ್ಲಿ ನಡೆದಿದೆ.
ಕರ್ನಾಟಕ ರಾಜ್ಯ ಮೀಸಲು ಪೋಲಿಸ್ ಪಡೆಯ ಇನ್ಸ್ ಪೆಕ್ಟರ್ ಮೊಹಮ್ಮದ್ ಆರೀಸ್ ಬಂಧಿತ ಆರೋಪಿ.
ಪೋಲಿಸ್ ಕಾನ್ಸ್‌ಟೇಬಲ್ ಒಬ್ಬರಿಗೆ KSRP 7ನೇ ಬೆಟಾಲಿಯನ್ ನ ಪೋಲಿಸ್ ಅತಿಥಿಗೃಹದ ಡ್ಯೂಟಿ ಹಾಕಲು ಲಂಚಕ್ಕೆ ಡಿಮಾಂಡ್ ಮಾಡಿದ್ದ ಆರೀಸ್ ಅದಕ್ಕಾಗಿ 18 ಸಾವಿರ ಲಂಚದ ರೂಪದಲ್ಲಿ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಖೆಡ್ಡಾಕ್ಕೆ ಕೆಡವಿದ್ದಾರೆ.
ಯಾರಿಗಾದರೂ ಗೆಸ್ಟ್ ಹೌಸ್ ಡ್ಯೂಟಿ ಹಾಕಬೇಕಿದ್ದರೆ ಪ್ರತಿ ತಿಂಗಳು 6 ಸಾವಿರ ರೂ. ಲಂಚ ನೀಡಲು ಆರೀಸ್ ಡಿಮ್ಯಾಂಡ್ ಮಾಡಿದ್ದ ಎನ್ನಲಾಗಿದೆ. ಅಲ್ಲದೇ ಇದುವರೆಗೆ ಸುಮಾರು ಐವತ್ತು ಸಾವಿರ ರೂಪಾಯಿ ವಸೂಲಿ ಮಾಡಿದ್ದ ಎನ್ನಲಾಗಿದೆ. ಅದರಂತೆ ಇಂದೂ ಕೂಡ ಆರೀಸ್ 18 ಸಾವಿರ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.
ಲೋಕಾಯುಕ್ತ ಎಸ್.ಪಿ. ನಟರಾಜ್, ಡಿವೈಎಸ್ಪಿ ಗಾನಾ ಪಿ.ಕುಮಾರ್, ಇನ್ಸ್‌ಪೆಕ್ಟರ್ ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್, ಚಂದ್ರಶೇಖರ್ ಸಿ.ಎಲ್ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡದ ಜೊತೆ ದಾಳಿ ನಡೆದಿದ್ದು, ಆರೀಸ್ ನನ್ನು ಈ ತಂಡ ವಶಕ್ಕೆ ಪಡೆದಿದೆ.
Leave a Comment